
ನವದೆಹಲಿ: ಪ್ರೇಮ ಸಂಬಂಧದಲ್ಲಿ ಬ್ರೇಕ್ ಅಪ್ ಆದಾಗ ಪುರುಷನ ವಿರುದ್ಧ ಮಹಿಳೆಯು ಬಲತ್ಕಾರ ಅಥವಾ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ.
ದೂರುದಾರ ಮಹಿಳೆಯೊಬ್ಬರು 2019ರಲ್ಲಿ ತನ್ನ ಗೆಳೆಯ ತನ್ನ ಮೇಲೆ ಅತ್ಯಾಚಾರವೆಸಗಿ ಮದುವೆ ಆಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧವನ್ನು ಹೊಂದಿದ್ದಾನೆ. ಇಲ್ಲವಾದರೆ ನಿಮ್ಮ ಕುಟುಂಬಕ್ಕೆ ಹಾನಿ ಮಾಡುತ್ತೇನೆ ಎಂದು ಬೆದರಿಸಿ ಲೈಂಗಿಕವಾಗಿ ಶೋಷಿಸಿದ್ದಾನೆ ಎಂದು ದೂರು ನೀಡಿದ್ದರು.
ಆರೋಪಿಯು ಈ ಆರೋಪವನ್ನು ರದ್ದುಗೊಳಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ದೆಹಲಿ ನ್ಯಾಯಾಲಯವು ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ಬಳಿಕ ಈ ಪ್ರಕರಣವು ಸುಪ್ರೀಂ ಕೋರ್ಟ್ ಮೆಟಿಲೇರಿತ್ತು.
ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹಿಳೆ ಮಾಡಿರುವ ಆರೋಪಗಳು ಆಧಾರ ರಹಿತವಾಗಿದ್ದು ಆ ವ್ಯಕ್ತಿ ನಿನ್ನ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದರೆ ನೀನು ಅವನನ್ನು ಏಕೆ ಭೇಟಿಯಾಗಿದ್ದೆ ಎಂದು ಪ್ರಶ್ನೆ ಮಾಡಿತು.
ಇಬ್ಬರ ಒಪ್ಪಿಗೆಯೊಂದಿಗೆ ಅವರ ನಡುವೆ ದೈಹಿಕ ಸಂಬಂಧವಿದ್ದು ಇದೆಲ್ಲವೂ ಮದುವೆಯ ಭರವಸೆಯಿಂದಲೇ ನಡೆಯುತ್ತಿತ್ತು ಎಂಬುದಕ್ಕೆ ಯಾವುದೇ ಸೂಚನೆಯೂ ಇಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಅತ್ಯಾಚಾರದ ಆರೋಪವನ್ನು ದಾಖಲಿಸಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ



















