
ಕಾರ್ಕಳ: ಮದ್ಯಪಾನದ ವ್ಯಸನದಿಂದ ಬೇಸತ್ತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ಚಿಕಿತ್ಸೆ ಫಲಿಸದೆ ಸಾವಿನಲ್ಲಿ ಅಂತ್ಯಗೊಂಡಿದೆ.
ಮೃತರನ್ನು ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಲ್ಲುಕೋರೆ ನಿವಾಸಿ ಮಣಿ(36) ಎಂದು ಗುರುತಿಸಲಾಗಿದೆ. ಮಣಿ ಕಲ್ಲುಕೋರೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಅತಿಯಾದ ಮದ್ಯಪಾನದ ಚಟ ಹೊಂದಿದ್ದರು. ಇದರಿಂದ ಅವರ ಲಿವರ್ ಹಾನಿಗೊಳಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ಆರೋಗ್ಯ ಗಂಭೀರವಾಗಿದೆ ಎಂದು ಎಚ್ಚರಿಸಿದರೂ ಅವರು ಮದ್ಯಪಾನ ಮುಂದುವರಿಸಿದ್ದರು ಎನ್ನಲಾಗಿದೆ.
ಈ ಹಿಂದೆ ಏಪ್ರಿಲ್ 2ರಂದು ವಿಷ ಸೇವಿಸಿ ಮಂಗಳೂರಿನ ಕಣಚೂರು ಆಸ್ಪತ್ರೆಗೆ ದಾಖಲಾಗಿದ್ದ ಮಣಿ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆದರೆ ಮೇ 14ರಂದು ಮತ್ತೆ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























