
ಮುಂಬೈ: ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ಸಿನಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದ್ದು ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶ್ರೀರೂರ್ ತಹಸಿಲ್‌ನಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯು ಫೆಬ್ರವರಿ 25ರಂದು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆತ ಆರಂಭದಲ್ಲಿ ಮಹಿಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿ ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್ ಬಳಿ ಕರೆದೊಯ್ದಿದ್ದ. ಮಹಿಳೆ ಬಸ್ಸಿನೊಳಗೆ ಲೈಟ್ ಆನ್ ಇರದ ಕಾರಣ ಬಸ್ ಹತ್ತಲು ಹಿಂಜರಿದಿದ್ದಳು. ಈ ವೇಳೆ, ಇದೇ ಸರಿಯಾದ ಬಸ್ ಎಂದು ಹೇಳಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಈಗಾಗಲೇ ಆತನ ವಿರುದ್ಧ ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಪ್ರಕರಣಗಳಿವೆ. ಪ್ರಕರಣವೊಂದರಲ್ಲಿ ಆತ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.






















































































