ಭಾಗ 529
ಭರತೇಶ್ ಶೆಟ್ಟಿ ಎಕ್ಕಾರು

ಸಂಚಿಕೆ ೫೨೯ ಮಹಾಭಾರತ
ಪಾರ್ಥನ ಶರಗಳು ಅತಿಬಲಯುತವಾಗಿದ್ದರೂ ಸುಧನ್ವನ ಹರಿಭಕ್ತಿ ಮಂತ್ರಾಸ್ತ್ರಗಳಾಗಿ ಆತನ ದಿವ್ಯಾಸ್ತ್ರಗಳನ್ನು ಕತ್ತರಿಸುತ್ತಾ ಸಾಗಿದವು. ಸುಧನ್ವನು ಪಾರ್ಥನನ್ನು ಉದ್ದೇಶಿಸಿ “ಹೇ ಅರ್ಜುನಾ! ನೀನು ಮಹಾಪ್ರತಾಪಿ ಹೌದು ಆದರೆ ದೈವಬಲವಿಲ್ಲದಿದ್ದರೆ ಕೇವಲ ಮನುಷ್ಯ ಪ್ರಯತ್ನದಿಂದ ಏನೇನು ಸಾಗದು. ಸುಮ್ಮನೆ ಕಾದಾಡಿ ಫಲವಿಲ್ಲ, ದೇವಭಕ್ತನಾದ ನನ್ನೊಡನೆ ನಿನ್ನ ವಿಕ್ರಮ ಸಾಗದು. ನನ್ನ ಶಕ್ತಿಗಿಂತಲೂ ಹೆಚ್ಚಾಗಿ ಶ್ರೀಹರಿಯ ನಂಬಿಕೆಯ ಬಲದಿಂದ ಹೋರಾಡುತ್ತಿದ್ದೇನೆ. ಇದನ್ನರಿತು ನಿನ್ನ ಶ್ರೇಯೋಭಿಲಾಷಿಯಾಗಿ, ನನ್ನ ಮಹದಾಸೆಯೂ ಆಗಿರುವ ಪರಿಹಾರವನ್ನು ಸೂಚಿಸುತ್ತೇನೆ ಕೇಳು. ಮಹಾಭಾರತ ಯುದ್ಧದಲ್ಲಿ ಆಚಾರ್ಯ ಭೀಷ್ಮರನ್ನು, ಗುರುದ್ರೋಣರನ್ನು, ಮಹಾಕಲಿ ಕರ್ಣನನ್ನು ನೀನು ಗೆದ್ದಿರಬಹುದು. ಆದರೆ ಅದಕ್ಕೆ ಕಾರಣ ಕೇವಲ ನಿನ್ನ ಸಾಮರ್ಥ್ಯವಷ್ಟೇ ಅಲ್ಲ. ಶ್ರೀಕೃಷ್ಣ ಪರಮಾತ್ಮನ ಸಾರಥ್ಯ. ಆತ ಕೇವಲ ನಿನ್ನ ಬಂಡಿಯ ಮೂತಿಯಲ್ಲಿ ಕುಳಿತ ಭೋವನಾಗಿರಲಿಲ್ಲ. ದೇವನಾಗಿದ್ದು ಅತಿಮಾನುಷ ಶಕ್ತಿಯಿಂದ ನಿನ್ನನ್ನು ಆತನ ಆಯುಧವಾಗಿಸಿ ಹೋರಾಡಿದ್ದನು. ಯುದ್ದ ಮಾಡಲಾರೆ ನನ್ನಿಂದ ಆಗದು ಎಂದಿದ್ದ ಅಸಹಾಯಕನಾದ ನಿನ್ನನ್ನು ಬಳಸಿಕೊಂಡು ಯುದ್ದ ಮಾಡಿ ಗೆದ್ದಿದ್ದಾನೆ. ಹಾಗೆಂದ ಮಾತ್ರಕ್ಕೆ ನೀನು ಏನು ಅಲ್ಲ ಎಂಬ ಭಾವವಲ್ಲ. ಶ್ರೀಕೃಷ್ಣ ಪರಮಾತ್ಮ ತನ್ನ ಕೈಯ ಆಯುಧವಾಗಿ ನಿನ್ನನ್ನು ಆರಿಸಿದ್ದನೆಂದರೆ ನೀನೆಷ್ಟು ಮಹಾತ್ಮ, ಪ್ರಬಲ ಎಂಬ ಅರಿವು ನನಗೂ ಇದೆ. ಆದರೂ ಹರಿಭಕ್ತಿಯನ್ನು ಶಕ್ತಿಯಾಗಿಸಿ ನಿಂತಿರುವ ನನ್ನೆದುರು ನಿನ್ನ ಅದ್ವಿತೀಯವಾದ ಪರಾಕ್ರಮ ಸಾಗದು. ಕೇವಲ ಸುಧನ್ವ ನಿನಗೆ ನಗಣ್ಯನು ಆಗಿರಬಹುದು ಆದರೆ ಹರಿಭಕ್ತ ಸುಧನ್ವನೆದುರು ಏಕಾಂಗಿಯಾಗಿ ಹೋರಾಟ ಮುಂದುವರಿಸಿದರೆ ನಿನ್ನ ಪಾಲಿಗೆ ಸೋಲಾದೀತು. ಸೋಲಬಾರದು ಎಂಬ ಆಸೆ ನಿನಗಿದ್ದರೆ ಈ ಕೂಡಲೆ ನಿನ್ನ ಸಾರಥಿಯಾಗಿ ಆ ಭಗವಂತನನ್ನು ಸ್ಮರಿಸಿ ಕರೆಸಿಕೊಳ್ಳಬೇಕು. ಭಗವಂತ ನನ್ನೆದುರು ಬಂದರೆ ಆತನ ಸಾರಥ್ಯ ಪೀಠ ನಿನ್ನ ರಥದಲ್ಲಿ ಆದರೂ ಗೆಲುವು ನನಗೆ ಲಭಿಸಲಿದೆ. ನಾನೇನು ಸಾಧಿಸಲು ಬಂದಿದ್ದೇನೋ ಅದರ ಸಂಪಾದನೆಯಾದರೆ ನನ್ನ ಪಾಲಿಗೆ ಜಯ ದೊರೆತಂತೆ. ಲೌಕಿಕವಾದ ಈ ಹೊಡೆದಾಟ ನನಗೆ ಮಹತ್ವದ್ದಾಗದು. ಆದಷ್ಟು ಶೀಘ್ರವಾಗಿ ಶ್ರೀಹರಿಯನ್ನು ನಿನ್ನ ಸಾರಥಿಯಾಗಿಸು. ಅನ್ಯಥಾ ನಿನಗೆ ಯಶಸ್ಸು ಸಿಗದು.” ಎಂದು ಸುಧನ್ವ ಪುನರುಚ್ಚರಿಸತೊಡಗಿದನು.
“ಹೇ ಮೂಢನೇ! ನಿನ್ನನ್ನು ನೀನು ಏನಂದುಕೊಂಡಿರುವೆ? ಪಾರ್ಥನ ಬಾಹುಬಲ ಪ್ರಾವಿಣ್ಯತೆಯ ಎದುರು ನೀನು ತೃಣ ಸಮಾನ. ನಿನ್ನಂತಹ ಹುಂಬರನ್ನು ಗೆಲ್ಲಲು ಶ್ರೀಕೃಷ್ಣ ಬರಬೇಕೆ? ಮೊದಲು ನನ್ನೊಡನೆ ಹೋರಾಡಲಾದೀತೊ ನೋಡು. ಆ ಬಳಿಕ ಕೃಷ್ಣನ ಬಗ್ಗೆ ಯೋಚಿಸು” ಎಂದನು ಅರ್ಜುನ.
ಬಿರುಸಾಗಿ ಸಾಗಿತು ಯುದ್ಧ. ಅರ್ಜುನನೇನು ಸಾಮಾನ್ಯನೆ? ಅಸಾಮಾನ್ಯ ಶೂರ, ರಣಭಯಂಕರ. ಧನುರ್ವೇದಿಯಾದ ಪಾರ್ಥನ ಅತ್ಯುಗ್ರ ಕದನ ಕೌಶಲ! ಜಗ ನಡುಗುವಂತೆ ಗುಡುಗಿದರೂ ಸುಧನ್ವನೆದುರು ಸಾಗಲಿಲ್ಲ. ಹರಿ ಭಕ್ತಿಯನ್ನು ಧಾರೆಯೆರೆದು ಪ್ರಯೋಗಿಸುತ್ತಿದ್ದ ಪ್ರತಿ ಶರಗಳೂ ಮಂತ್ರಾಸ್ತ್ರಗಳಾಗಿ ಅರ್ಜುನನ ದಿವ್ಯಶರಗಳನ್ನು ಕತ್ತರಿಸತೊಡಗಿದ ಸುಧನ್ವ ನಿರಾತಂಕವಾಗಿ ಯುದ್ಧ ಮಾಡುತ್ತಿದ್ದಾನೆ.
“ಎಲೈ ಪಾರ್ಥ ನಿನಗಿತ್ತ ಹಿತವಚನ ನಿಷ್ಪ್ರಯೋಜಕವಾಗುತ್ತಿದೆ. ನನಗೀಗ ಅರ್ಥವಾಗುತ್ತಿದೆ ನಮ್ಮ ಯುದ್ಧದ ನಿರ್ಣಾಯಕ ಪರಿಣಾಮ ಮಾತ್ರ ನಿನ್ನಲ್ಲಿ ಪರಿವರ್ತನೆ ಮಾಡಬಲ್ಲುದು” ಎಂದು ಐದು ಬಾಣಗಳನ್ನು ಸೆಳೆದು ಮಂತ್ರಿಸಿ ಹರಿ ಭಕ್ತಿಯಿಂದ ಪಾರ್ಥನ ರಥದ ಕುದುರೆ ಹಾಗೂ ಸಾರಥಿಯನ್ನು ಗುರಿಯಾಗಿ ಪ್ರಯೋಗಿಸಿದನು. ನೋಡುತ್ತಿದ್ದಂತೆಯೆ ಪಾರ್ಥನ ಸಾರಥಿಯ ಶಿರಚ್ಛೇದನವಾಯಿತು. ಕುದುರೆಗಳು ಗಾಯಾಳಾಗಿ ಮುಗ್ಗರಿಸಿದವು. ಆದರೂ ಸಾವರಿಸಿಕೊಂಡ ಅರ್ಜುನ ಧೈರ್ಯಗುಂದದೆ ಕದನ ಕಲಿಯಾಗಿ ಸಮರ ಮುಂದುವರಿಸಿದನು.
“ಹೇ ಅರ್ಜುನಾ! ದುಡುಕಬೇಡ. ಸಾರಥಿಯಿಲ್ಲದೆ, ರಥ ನಿಯಂತ್ರಣವನ್ನೂ ಕಳಕೊಂಡು ಹಠ ಸಾಧಿಸಲು ಮುಂದಾಗದಿರು. ಸಾರಥಿಯಾಗಿ ನನ್ನ ಮನೋರಥಿಯನ್ನು ಕರೆಸಿಕೋ. ಭಗವಂತ ಶ್ರೀಕೃಷ್ಣ ನಿನ್ನ ಸಾರಥ್ಯ ಪೀಠ ಅಲಂಕರಿಸಿದರೆ ಸೊಗಸಾಗುವುದು.” ಎಂದು ಮತ್ತೆ ಮತ್ತೆ ಸುಧನ್ವ ಎಚ್ಚರಿಸಿದರೂ ಅರ್ಜುನನ ಸ್ವಾಭಿಮಾನ ಕುಂದಲಿಲ್ಲ.
ಸುಧನ್ವನು ಕದಲದೆ ಕದನ ಕಲಿಯಾಗಿ ಹೋರಾಡುತ್ತಾ ಅರ್ಜುನನ್ನು ಕೆಣಕಿ ಸೆಣಸಾಡಿ ಸೋಲಿಸಿ ಬಿಟ್ಟನು. ಹರಿಭಕ್ತಿಯ ಸಾಮರ್ಥ್ಯಕ್ಕೆ ಅರ್ಜುನ ಸೋತು ಬಿದ್ದನು.
ಅಯ್ಯೋ ನನ್ನ ವಿಧಿಯೇ! ಕೇವಲ ಒಬ್ಬ ಯುವರಾಜ, ಅದೂ ಚಂಪಕಾವತಿಯಂತಹ ಸಣ್ಣ ರಾಜ್ಯದ ದುರ್ಬಲ ಕುಮಾರನೆದುರು ಕೈಸೋಲಾಯಿತೆ? ನಂಬಲಾಗುತ್ತಿಲ್ಲ. ಮಾಧವಾ! ನೀನು ಲೀಲಾ ಮಾನುಷನೆಂದು ಬಲ್ಲೆ. ಆದರೆ ಇಂದು ನಿನ್ನ ಅನುಚರನಾದ ನನಗೆ ಪರೀಕ್ಷೆ ತಂದಿತ್ತೆಯಾ? ಮಾಧವಾ, ಅಚ್ಯುತಾ, ಅನಂತಾ, ಕೇಶವಾ, ಮಧುಸೂದನಾ ಕೇವಲ ನನ್ನ ವೈಯಕ್ತಿಕ ಸಂಗ್ರಾಮವಾದರೆ ಪ್ರಾಣಹರಣವಾಗುವ ತನಕ ಹೋರಾಡಿ ಸಂತೋಷದಿಂದ ಮರಣವನ್ನಪ್ಪುತ್ತಿದೆ. ಆದರೆ ಅಣ್ಣ ಧರ್ಮಜನ ಯಜಮಾನಿಕೆಯ ಅಶ್ವಮೇಧಯಾಗ ಯಾವ ಕಾರಣಕ್ಕೂ ನಿಲ್ಲಬಾರದು. ದಯೆತೋರು ದೇವಾ! ಅರಿತೋ – ಅರಿಯದೆಯೋ ನಾನು ಮಾಡಿದ ಅಪರಾಧಗಳಿದ್ದರೆ ಮನ್ನಿಸಿ ಕೃಪೆದೋರಬೇಕು. ಹೀಗೆ ಆತ್ಮಾವಲೋಕನ ಮಾಡುತ್ತಾ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಬೇಡಿ ಕರೆಯತೊಡಗಿದನು.



























