ಭಾಗ 165
ಭರತೇಶ್ ಶೆಟ್ಟಿ ,ಎಕ್ಕಾರ್

ಹೀಗೆ ಧೃತರಾಷ್ಟ್ರನನ್ನು ಮಹಾರಾಜನ ಸ್ಥಾನದ ಜವಾಬ್ದಾರಿಯಲ್ಲಿ ನಿಂತು ವಿನಾಶಕಾರಿಯಾಗಬಲ್ಲ ದ್ಯೂತವನ್ನು ನಿಲ್ಲಿಸುವಂತೆ ಆಜ್ಞೆ ಮಾಡಲು ವಿದುರ ಮಂತ್ರಿಯಾಗಿ ನಿವೇದಿಸಿದನು. ಧೃತರಾಷ್ಟ್ರ ಮಾತ್ರ ಕಣ್ಣು ಕಾಣದ ಕುರುಡನಾಗಿದ್ದು, ಈಗ ಮಾತು ಬಾರದ ಮೂಕನಂತೆ ಮೌನವಾಗಿ ಕುಳಿತನು. ದುರ್ಯೋಧನ ರೊಚ್ಚಿಗೆದ್ದು ಸಂಬಂಧದಲ್ಲಿ ಚಿಕ್ಕಪ್ಪ, ಅಧಿಕಾರದಲ್ಲಿ ಮಂತ್ರಿಯಾಗಿದ್ದರೂ ಮರ್ಯಾದೆ ನೀಡದೆ, “ವಿದುರಾ! ನಿನ್ನ ಅಭಿಪ್ರಾಯ ಕೇಳಿದವರ್ಯಾರು? ನನ್ನ ಹುಟ್ಟಿನಿಂದಲೇ ನಿನಗೆ ನನ್ನನ್ನು ಕಂಡರೆ ತಿರಸ್ಕಾರ. ನನ್ನ ಏಳಿಗೆ ಸಹಿಸದ ಮತ್ಸರಿ. ಪಕ್ಷಪಾತಿಯಾದ ನೀನು ಹಸ್ತಿನೆ ಬಿಟ್ಟು ಹೊರಹೋಗಬಹುದು. ನಿನಗಿಷ್ಟವಿರುವಲ್ಲಿ ಹೋಗಿ ಬದುಕಿಕೋ” ಎಂದು ಅಬ್ಬರಿಸಿದನು.
ವಿದುರನ ಎದುರಲ್ಲಿ ಹುಟ್ಟಿ ಬೆಳೆದ ಮಗು ಕೌರವ. ಆತನ ಮಾತಿನಿಂದ ಬೇಸರ ಪಡದೆ ಮತ್ತೊಮ್ಮೆ ತನ್ನ ಅಣ್ಣ ಧೃತರಾಷ್ಟ್ರನಲ್ಲಿ ತಮ್ಮನಾಗಿ ನಮ್ಮ ವಂಶದ ಏಳಿಗೆ, ಮಕ್ಕಳ ಪ್ರಾಣ ರಕ್ಷಣೆ, ಸಾಮ್ರಾಜ್ಯದ ಉಳಿವು ಇಷ್ಟನ್ನು ಮಾಡಲು ಬೇಡಿಕೊಂಡನು. ಆಗಲೂ ದುರ್ಯೋಧನ ಮತ್ತೆ ಎದ್ದು ಹಿಗ್ಗಾಮುಗ್ಗಾ ನಿಂದಿಸಿ, ಮನಬಂದಂತೆ ಆಡಿಕೊಂಡನು. ಶಕುನಿಯೂ ಜೊತೆಯಾಗಿ ವಿದುರನನ್ನು ಅಪಮಾನಿಸಿದನು.
ಆಚಾರ್ಯರಾದ ಭೀಷ್ಮ, ದ್ರೋಣ, ಕೃಪರು ನಡೆಯುತ್ತಿದ್ದ ಪ್ರಕರಣವನ್ನೆಲ್ಲಾ ಗಮನಿಸುತ್ತಾ ಚಿಂತಾಕ್ರಾಂತರಾಗಿ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದರು.
ಶಕುನಿ ಮತ್ತೆ ಎಲ್ಲರ ಗಮನವನ್ನು ಆಟದೆಡೆ ಸೆಳೆದು ದ್ಯೂತ ಆರಂಭವಾಯಿತು. ಮತ್ತೆ ಧರ್ಮರಾಯ ಸೋಲುತ್ತಾ ಗೋಶಾಲೆ, ಗಜಶಾಲೆ, ಶಸ್ತ್ರಾಗಾರ, ಸೈನಿಕರು, ಕಡೆಗೆ ಪ್ರಜಾವರ್ಗದ ಸಂಪತ್ತನೂ ಪಣವಾಗಿಟ್ಟು ಕಳೆದುಕೊಂಡನು. ತಮ್ಮಂದಿರಾದ ಭೀಮನನ್ನು – ದುಶ್ಯಾಸನನಿಗೆ ಪ್ರತಿಯಾಗಿಟ್ಟು, ಅರ್ಜುನನ್ನು – ಕರ್ಣನಿಗೆ, ನಕುಲನನ್ನು ವಿಕರ್ಣನಿಗೆ, ಹೀಗೆ ಪಣಕ್ಕಿಡುತ್ತಾ ಒಬ್ಬೊಬ್ಬರನ್ನೇ ಸೋತು ಸಹದೇವನನ್ನೂ ಕಳೆದುಕೊಂಡನು. ಕೊನೆಗೆ ತನ್ನನ್ನು ತಾನೇ ದುರ್ಯೋಧನನ ಪ್ರತಿಯಾಗಿ ಪಣಕ್ಕಿಟ್ಟು ದಾಸನಾಗಿ ಬಿಟ್ಟನು.
ಕೌರವ ಪಾಳಯದ ಸಂತೋಷಕ್ಕೆ ಪಾರವೇ ಇಲ್ಲ. ಹಿರಿಯರೂ ಪ್ರಾಜ್ಞರೂ ಆದವರು ಆತಂಕ್ಕೊಳಗಾಗಿದ್ದಾರೆ. ಪಾಂಡವರು ಅಣ್ಣನ ಇಂದಿನ ನಡೆಯ ಬಗ್ಗೆ ಗೊಂದಲಕ್ಕೊಳಗಾಗಿ ಭಗವದ್ ಪ್ರಾರ್ಥನೆಯಲ್ಲಿ ನಿರತರಾಗಿದ್ದಾರೆ. ಶಕುನಿ ಅತಿ ಉಲ್ಲಾಸದಿಂದ “ಧರ್ಮರಾಯಾ! ಇನ್ನೇನಿದೆ ? ಇನ್ನೇನಿದೆ?” ಎಂದು ಕೇಳಿದಾಗ ತಲೆತಗ್ಗಿಸಿ ಕುಳಿತುಕೊಂಡನು. ಆಗ ಶಕುನಿ ಉದ್ದೇಶಿತ ಗುರಿ ದ್ರೌಪದಿಯಲ್ಲವೇ ? ಆ ಕುರಿತು ಪೀಠಿಕೆಯಾಗಿ ಮಾತಿಗಾರಂಭಿಸಿದ ” ಧರ್ಮರಾಯ! ನಿಮ್ಮದೇನೇನಿದೆಯೋ ಅದೆಲ್ಲವನ್ನೂ ಕಳಕೊಂಡು ನಿಮ್ಮನ್ನೂ ಒಡ್ಡಿ ಸೋತು ದಾಸರಾಗಿರುವಿರಿ. ಇನ್ನು ಆಟ ಬೇಕೆ? ಮುಂದುವರಿಸುವುದಾದರೆ ಪಣಕ್ಕಿಡಲು ನಿನ್ನ ಬಳಿ ಇನ್ನೇನಿದೆ? ಸೋತಿದ್ದೇನೆ ಎಂದು ಒಪ್ಪಿಕೊಳ್ಳುವ ಹೊತ್ತು ಬಂದಿತೇ? ಹಾ! ನಿಮ್ಮವೈವರಿಗೂ ಪತ್ನಿಯಾಗಿರುವ ದ್ರೌಪದಿಯಿದ್ದಾಳಲ್ಲ. ಪಾಂಡವರಾದ ನಿಮಗೆ ಭಾಗ್ಯದ ಬಾಗಿಲು ತೆರೆದದ್ದು ಆಕೆಯನ್ನು ವರಿಸಿದ ನಂತರದಲ್ಲಿ. ಅವಳ ಭಾಗ್ಯದಿಂದ ಕಳೆದುಕೊಂಡದ್ದನ್ನು ಪುನರಪಿ ನಿಮಗೆ ಜಯಿಸುವ ಅವಕಾಶ ಒದಗಿದರೂ ಒದಗೀತು. ಹಾಗಿರುವಾಗ ಒಮ್ಮೆ ಪ್ರಯತ್ನಿಸಿ ನೋಡುವೆಯಾದರೆ ಮುಂದಾಗು. ಕೌರವೇಶ್ವರನ ವಲ್ಲಭೆ ಭಾನುಮತಿಗೆ ಪ್ರತಿಯಾಗಿ ಪಣಕ್ಕೆ ಒಡ್ಡುವೆಯಾದರೆ ಅವಕಾಶವಿದೆ” ಎಂದು ನುಡಿದು ಪ್ರೇರಕನಾದನು. ಹೀಗೆ ನುಡಿದು ತಿರುಗಿ ತನ್ನವರತ್ತ ನೋಡಿ ಅಪಹಾಸ್ಯದ ನಗೆ ಬೀರಿದಾಗ ದುರ್ಯೋಧನ ಮೀಸೆ ತಿರುವುತ್ತಾ ಕುಡಿ ನಗೆ ಸೂಸುತ್ತಾ ಏನಾಗುತ್ತದೆ ಎಂಬ ಕಾತರದಿಂದ ಕಾಯುತ್ತಿದ್ದಾನೆ.
ಮುಂದುವರಿಯುವುದು….





















