33.4 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 105

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೦೬ ಮಹಾಭಾರತ

ಗಂಧರ್ವ ಚಿತ್ರರಥ ತನ್ನ ಅಭಿಪ್ರಾಯ ಮತ್ತು ಸಲಹೆಯನ್ನು ವಿವರಿಸಲಾರಂಭಿಸಿದನು. “ಮಹಾಸಾಹಸಿಗಳಾದ ನಿಮ್ಮ ಶ್ರೇಯಸ್ಸಿಗೆ ಮಂತ್ರಲೋಚನೆ ಮಾಡಿ ಮಾರ್ಗದರ್ಶನ ಮಾಡುವವರ ಅವಶ್ಯಕತೆಯಿದೆ. ಇಲ್ಲೇ ಸಮೀಪದಲ್ಲಿ ಉತ್ಕೋಚ ವೆಂಬ ಪುಣ್ಯಕ್ಷೇತ್ರವಿದೆ. ಅಲ್ಲಿ “ಧೌಮ್ಯ” ರೆಂಬ ತಪಸ್ವಿಯೋರ್ವರಿದ್ದಾರೆ. ಅವರು ಅತ್ಯುತ್ತಮ ವೇದಜ್ಞರೂ, ಶಾಸ್ತ್ರವೇತ್ತರೂ, ಸುಜ್ಞಾನಸಂಪನ್ನರೂ, ಮಂತ್ರ ನಿಪುಣರೂ ಮಾತ್ರವಲ್ಲದೆ ಕಾರ್ಯಕುಶಲರೂ ಆಗಿದ್ದಾರೆ. ಅವರನ್ನು ಕಂಡು ಉಪಚರಿಸಿ ನಿಮ್ಮ ಪೌರೋಹಿತ್ಯಕ್ಕೆ ಒಲಿಸಿಕೊಂಡು ಗುರುಗಳಾಗಿ ಸ್ವೀಕರಿಸುವ ಬಗ್ಗೆ ಯೋಚಿಸಬೇಕು. ಹಾಗೆ ಮಾಡುದರೆ ನೀವು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ದಯವಿಟ್ಟು ಈ ಕೆಲಸವನ್ನು ಮೊದಲು ಮಾಡಿಕೊಂಡು ಮತ್ತೆ ಮುಂದುವರಿಯಿರಿ”. ಎಂದು ಸೂಚಿಸಿ, ಪಾಂಡವರನ್ನು ಹರಸಿ ಅಂಗಾರಪರ್ಣ ಗಂಧರ್ವ ತನ್ನ ಲೋಕ ಸೇರಿಕೊಂಡನು.

ರಾತ್ರಿ ಬೆಳಗಾಯಿತು, ಪಾಂಡವರು ನಿತ್ಯಕರ್ಮಗಳನ್ನು ಪೂರೈಸಿದರು. ಗಂಧರ್ವನ ನಿರ್ದೇಶನದಂತೆ ಧೌಮ್ಯರ ಆಶ್ರಮದತ್ತ ಪ್ರಯಾಣ ಬೆಳೆಸಿದರು. ಸಂಜೆಯ ಹೊತ್ತಾಗಿದೆ ಅಲ್ಲಿಗೆ ತಲುಪಿದಾಗ. ಧೌಮ್ಯ ಋಷಿವರ್ಯರು ಅನುಷ್ಠಾನ ನಿರತರಾಗಿದ್ದ ಕಾರಣ ಪಾಂಡವರನ್ನು ಅವರ ಶಿಷ್ಯರು ಸ್ವಾಗತಿಸಿ ಉಪಚರಿಸಿದರು. ರಾತ್ರಿಯ ಸಮಯ ಧೌಮ್ಯರನ್ನು ಕಂಡು ವಂದಿಸಿ, ಏಕಾಂತದಲ್ಲಿ ಸವಿವರವಾಗಿ ಪರಿಚಯ ಹಾಗೂ ಪ್ರಸಕ್ತ ಸ್ಥಿತಿಗೆ ಕಾರಣಗಳನ್ನು ವಿವರಿಸಿ ಹೇಳಿಕೊಂಡರು. ಬಳಿಕ ಅವರಲ್ಲಿ ವಿನಂತಿಸಿ ತಮ್ಮ ಪೌರೋಹಿತ್ಯದ ಆಕಾಂಕ್ಷಿಗಳಾಗಿದ್ದೇವೆ, ನಮ್ಮನ್ನು ಉದ್ದರಿಸಬೇಕೆಂದು ಬೇಡಿದರು. ಒಪ್ಪಿದ ಧೌಮ್ಯರು ಒಂದೆರಡು ದಿವಸ ಪಾಂಡವರನ್ನು ತಮ್ಮ ಆಶ್ರಮದಲ್ಲೇ ಉಳಿಸಿಕೊಂಡು ದಿವ್ಯ ಉಪದೇಶಗಳನ್ನು ಬೋಧಿಸಿದರು. ಬಳಿಕ ತಾನೇ ಹೊರಟು ಕುಂತಿ, ಮತ್ತಾಕೆಯ ಪುತ್ರರ ಜೊತೆ ಪಾಂಚಾಲ ದೇಶದತ್ತ ಪ್ರಯಾಣ ಆರಂಭಿಸಿದರು. ದಾರಿ ಮಧ್ಯೆ ಬಹು ಸ್ವಾರಸ್ಯ ಕಥೆಗಳನ್ನೂ, ಧರ್ಮ ಜಿಜ್ಞಾಸೆಯ ತರ್ಕಗಳನ್ನೂ ಮಾಡುತ್ತಾ, ಸುಜ್ಞಾನ ಬೋಧನೆಗೈಯುತ್ತಾ ಪಾಂಚಾಲ ದೇಶಕ್ಕೆ ಬಂದು ಮುಟ್ಟಿದರು.

ಪಾಂಚಾಲ ದೇಶದ ರಾಜಧಾನಿ ಮೊದಲೇ ವೈಭವ, ಶೃಂಗಾರದ ನಗರ. ಈಗ ಸ್ವಯಂವರ ಆಯೋಜನೆಯ ಕಾರಣ ಭೂ ಸ್ವರ್ಗದಂತೆ ಕಂಗೊಳಿಸುತ್ತಿತ್ತು. ಧೌಮ್ಯರ ಜೊತೆ ನಗರ ಪೂರ್ಣ ಸಂಚಾರಗೈದು ವಿಶೇಷಗಳ ವಿವರಣೆ ಪಡೆದರು. ಬಳಿಕ ನಗರದ ಅಂಚಿನಲ್ಲಿ ಕುಂಬಾರನೋರ್ವನ ಮನೆಗೆ ಬಂದು ಆಶ್ರಯ ಕೇಳಿದರು. ಸಂತೋಷದಿಂದ ಒಪ್ಪಿದ ಕುಂಬಾರ ತನ್ನ ಕರ್ಮಶಾಲೆಯನ್ನು ಸ್ವಚ್ಚಗೊಳಿಸಿ, ನೆಲಹಾಸು ಹಾಕಿ, ಯಥೋಚಿತ ಸತ್ಕಾರದ ವ್ಯವಸ್ಥೆ ಮಾಡಿದನು. ಪಾಂಡವರೂ, ಧೌಮ್ಯರೂ ಅಲ್ಲೇ ವಿರಮಿಸಿದರು.

ಪಾಂಚಾಲದ ಮಹಾರಾಜ ದ್ರುಪದ ಆರ್ಯಾವರ್ತದ ರಾಜ, ಯುವರಾಜರೆಲ್ಲರಿಗೂ ಸ್ವಯಂವರದ ನಿಮಂತ್ರಣ ಕಳುಹಿಸಿದ್ದ. ಅಂತೆಯೇ ಬರುತ್ತಿದ್ದ ಅಭ್ಯಾಗತ ರಾಜಾಧಿರಾಜರಿಗೆ ಯೋಗ್ಯ ವಸತಿ, ಉಪಚಾರದ ವ್ಯವಸ್ಥೆಗಳನ್ನೂ ಮಾಡಿಸಿದ್ದನು. ಸ್ವಾಗತ ಗೋಪುರಗಳು, ಅಲಂಕಾರ, ಪೂರ್ಣಕುಂಭ ಸ್ವಾಗತ, ಊಟೋಪಚಾರ, ಪರಿಚಾರಕರ ಸೇವೆ ಹೀಗೆ ಸುವ್ಯವಸ್ಥಿತವಾಗಿ ಎಲ್ಲವೂ ನಿರ್ವಹಿಸಲ್ಪಟ್ಟಿತ್ತು.

ಸ್ವಯಂವರ ಪಣ ಮತ್ಸ್ಯ ಯಂತ್ರ ಲಾಂಛನ ಭೇದನಕ್ಕಾಗಿ ವಿಶಾಲವಾದ ರಂಗ ಮಂಟಪ ನಿರ್ಮಾಣವಾಗಿತ್ತು. ಸುತ್ತುವರಿದು ರಾಜ ಆಸನಗಳ ವ್ಯವಸ್ಥೆಯ ಸಭಾಮಂಟಪ, ಬ್ರಾಹ್ಮಣ, ಋಷಿ, ಮುನಿಗಳಿಗೆ ಯೋಗ್ಯ ಆಸನದ ಪ್ರತ್ಯೇಕ ವ್ಯವಸ್ಥೆ, ಪ್ರಜೆಗಳು ಸ್ಪರ್ಧೆ ವೀಕ್ಷಿಸಲು ಸಭಾಂಗಣ ಹೀಗೆ ಅದ್ಬುತವಾದ ಸೌಕರ್ಯಗಳು, ವಿಶೇಷ ಅಲಂಕಾರಗಳಿಂದ ಸಭಾಮಂಟಪ ವಿಶೇಷ ರೀತಿಯಲ್ಲಿ ನಿಪುಣ ಕುಶಲ ಕೃತಿಗಳಿಂದ ಸಿಂಗರಿಸಲ್ಪಟ್ಟು ರಾರಾಜಿಸುತ್ತಿತ್ತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page