
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಮದರಸಾಗಳಲ್ಲಿ ತರಗತಿಗಳು ಆರಂಭವಾಗುವ ಮೊದಲು ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿದೆ. ಮದರಸಾ ಶಿಕ್ಷಣ ನಿರ್ದೇಶನಾಲಯ ಈ ಕುರಿತು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ.
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಖುದಿರಾಮ್ ತುಡು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದ್ದು, ಮದರಸಾಗಳಲ್ಲೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
ಆದೇಶದ ಪ್ರಕಾರ, ಸರ್ಕಾರಿ ಮಾದರಿ ಮದರಸಾಗಳು, ಅನುದಾನಿತ ಹಾಗೂ ಅನುದಾನರಹಿತ ಮದರಸಾಗಳು, ಎಂಎಸ್ಕೆ ಮತ್ತು ಎಸ್ಎಸ್ಕೆ ಸಂಸ್ಥೆಗಳಲ್ಲೂ ಪ್ರಾರ್ಥನಾ ಸಭೆಯಲ್ಲಿ ‘ವಂದೇ ಮಾತರಂ’ ಹಾಡುವುದು ಕಡ್ಡಾಯವಾಗಲಿದೆ.
ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಭಾವನೆ ಬೆಳೆಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಇದರ ಅನುಷ್ಠಾನದ ಕುರಿತ ಸಂಪೂರ್ಣ ಮಾರ್ಗಸೂಚಿಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.



























