
ಮಂಗಳೂರು: ಮೇ 20ರಂದು ಆನ್‌ಲೈನ್ ಮೂಲಕ ಔಷಧ ಮಾರಾಟವನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮೆಡಿಕಲ್ ಅಂಗಡಿಗಳು 24 ಗಂಟೆಗಳ ಬಂದ್ ನಡೆಸಲಿವೆ ಎಂದು ದ.ಕ. ಔಷಧ ವ್ಯಾಪಾರಿಗಳ ಸಂಘ ತಿಳಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಹಾಗೂ ಕರ್ನಾಟಕ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಕರೆಯಂತೆ ರಾಷ್ಟ್ರವ್ಯಾಪಿ ಬಂದ್‌ಗೆ ಜಿಲ್ಲೆಯ ಎಲ್ಲಾ ಸದಸ್ಯರು ಬೆಂಬಲ ನೀಡಲಿದ್ದಾರೆ ಎಂದರು.
ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟದಿಂದ ಷೆಡ್ಯೂಲ್ ಡ್ರಗ್ಸ್ ದುರುಪಯೋಗ, ಸ್ವಯಂ ಚಿಕಿತ್ಸೆ ಹಾಗೂ ನಕಲಿ ಚೀಟಿಗಳ ಮೂಲಕ ಔಷಧ ಪಡೆಯುವ ಅಪಾಯ ಹೆಚ್ಚುತ್ತಿದೆ. ಅಲ್ಲದೆ, ಔಷಧಗಳ ಸುರಕ್ಷಿತ ದಾಸ್ತಾನು ಮತ್ತು ಸರಬರಾಜಿನ ಮೇಲೂ ಅನುಮಾನಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕುರಿತು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ವೆಬ್‌ಸೈಟ್ ಮತ್ತು ಪೋರ್ಟಲ್‌ಗಳ ಮೂಲಕ ನಡೆಯುತ್ತಿರುವ ಔಷಧ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಎ.ಕೆ. ಜಮಾಲ್, ಅಮೃತ್ ಕಿರಣ್ ರೈ, ಶ್ರೀನಿವಾಸ್ ಭಟ್, ಚಂದ್ರಶೇಖರ ಭಟ್, ಸುರೇಶ್ ಆಳ್ವ ಹಾಗೂ ಶರಣಂ ಶೆಟ್ಟಿ ಪಾಲ್ಗೊಂಡಿದ್ದರು.























