
ಮೈಸೂರು: ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಕೇಂದ್ರದಿಂದ ರಾಜ್ಯಕ್ಕೆ ಏನು ತರಬೇಕೋ ಅದನ್ನು ನೋಡಿ. ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಈಗ ಎಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ. ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದ್ಯಾ? ಎಫ್‌ಐಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್‌ನಲ್ಲಿ ಇರುವವರು ರಾಜೀನಾಮೆ ಕೊಡುತ್ತಾರಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಪ್ರಶ್ನಿಸಿದ ಅವರು 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲು ಆಗುತ್ತಾ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ನೀಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಚಾಮುಂಡಿ ದೇವಿಯ ಆಶೀರ್ವಾದ ಮತ್ತು ಜನರ ಆಶೀರ್ವಾದದಿಂದ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಇಬ್ಬರು ಸೇರಿ ಅವರನ್ನು ಸೋಲಿಸಲು ಯತ್ನಿಸಿದೆವು. ಆದರೆ ಚಾಮುಂಡಿ ಆಶೀರ್ವಾದಿಂದ ಸಿದ್ದರಾಮಯ್ಯ ಅಂದು ಜಯಗಳಿಸಿದ್ದು ಎನ್ನುವ ಮೂಲಕ ಸಿಎಂ ಅವರನ್ನು ಹೊಗಳಿದ್ದಾರೆ.













