
ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತವೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದು ಗುರುವಾರ ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಟ್ ನೇತೃತ್ವದ ಪೀಠವು ಕೈದಿಗಳ ವಿರುದ್ಧ ತಾರತಮ್ಯಕ್ಕೆ ಜಾತಿ ಕಾರಣವಾಗಬಾರದು, ಅಂತಹ ವಿಷಯಗಳನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪನ್ನು ಪ್ರಕಟಿಸಿದೆ.
ಕೆಲಸ ವಿಚಾರದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಿ ಅಪಾಯಕಾರಿಯಾದ ಕೊಳಚೆ ತೊಟ್ಟಿಗಳ ಸ್ವಚ್ಛಗೊಳಿಸುವ ಕೆಲಸಕ್ಕೆ ಕೈದಿಗಳನ್ನು ಉಪಯೋಗಿಸಿಕೊಳ್ಳಬಾರದು. ಒಂದು ಜಾತಿಯವರನ್ನು ಕಸ ಗುಡಿಸುವವರನ್ನಾಗಿ ಆಯ್ಕೆ ಮಾಡುವುದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಮೇಲ್ಜಾತಿಯ ಕೈದಿಗಳಿಗೆ ಅಡುಗೆ ಕೆಲಸಗಳನ್ನು ಹಂಚುವುದು, ಕೆಳಜಾತಿಯ ಕೈದಿಗಳಿಗೆ ಶೌಚಗೃಹ ಸ್ವಚ್ಛತೆ, ಕಸಗುಡಿಸುವ ಕೆಲಸಗಳನ್ನು ನೇಮಿಸುವುದು ಸೇರಿದಂತೆ ಕೆಲಸಗಳು ತಾರತಮ್ಯದಿಂದ ಕೂಡಿವೆ ಎಂದು ಪೀಠವು ಸ್ಪಷ್ಟನೆ ನೀಡಿದೆ. ಕೈದಿಗಳನ್ನು ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸುವುದು ಬದಲಾವಣೆಯನ್ನು ತರುವುದಿಲ್ಲ ಹಾಗೂ ಅವರ ಆತ್ಮ ಗೌರವವನ್ನು ಉಲ್ಲಂಘಿಸುವುದು, ವಸಾಹತುಶಾಹಿಯ ಸಂಕೇತವಾಗಿದೆ ಎಂದು ನ್ಯಾಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ.
ಈಗಾಗಲೇ ಈ ಕೃತ್ಯ ಎಸಗಿರುವ ಜೈಲಿನಲ್ಲಿ ತಿಂಗಳೊಳಗೆ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ.













