
ಉಡುಪಿ: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು ಕೇಸ್ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳು ಜೈಲಿನಲ್ಲಿದ್ದಾರೆ.
ಇದೀಗ ತನಿಖಾಧಿಕಾರಿಗಳು ಮಾದಕ ಜಾಲದ ಬೆನ್ನು ಬಿದ್ದಿದ್ದು ಡ್ರಗ್ಸ್ ಜಾಲದ ಸರಪಳಿ ಕಾರ್ಕಳದಿಂದ ಬೆಂಗಳೂರು, ಬೆಂಗಳೂರಿಂದ ಆಂಧ್ರಪ್ರದೇಶಕ್ಕೆ ಲಿಂಕ್ ಆಗಿರುವುದು ಬಯಲಾಗಿದೆ. ಹಾಗಾಗಿ ಹಣ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ನಿಗಾ ಇಟ್ಟು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಅಲ್ತಾಫ್‌ನ ಬೆನ್ನತ್ತಿದ್ದ ಪೊಲೀಸರಿಗೆ ಡ್ರಗ್ಸ್ ಜಾಲದ ನಿಜ ದರ್ಶನವಾಗಿದ್ದು ಪ್ರಕರಣದ ಆಳ ಬಗೆದಷ್ಟು ಹೊಸ ಹೊಸ ಹೆಸರುಗಳು, ಅಮಲು ಪದಾರ್ಥಗಳು ಪತ್ತೆಯಾಗುತ್ತಿವೆ. ಆರೋಪಿಗೆ ಡ್ರಗ್ಸ್ ಎಲ್ಲಿಂದ ಬಂತು? ಅಮಲು ಪದಾರ್ಥಗಳನ್ನು ಕೊಟ್ಟವರು ಯಾರು? ಎಂಬ ಪ್ರಶ್ನೆಗಳನ್ನಿಟ್ಟುಕೊಂಡೇ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಪೊಲೀಸರ ಕಣ್ಣು ಬೆಂಗಳೂರಿನ ತಿರುಗಿದ್ದು ಮತ್ತೋರ್ವ ಆರೋಪಿ ಮೂಲದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಅಭಯ್ ಎಂಬ ವ್ಯಕ್ತಿ ಅಲ್ತಾಫ್‌ಗೆ ಡ್ರಗ್ಸ್ ನೀಡಿದ್ದ. ಈತನ ಜೊತೆ ಡ್ರಗ್ಸ್ ದಂಧೆಯಲ್ಲಿದ್ದವರು ಗಿರಿರಾಜ್, ಜಾನ್ ಶಂಕರಪುರ ಹಾಗೂ ಕಾರ್ಕಳದ ಶಾಹಿದ್. ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಹಾಗೂ ಆರೋಪಿಗಳನ್ನು ಸೆರೆ ಹಿಡಿಯುವಾಗ ಸಿಕ್ಕ ಮಾದಕ ವಸ್ತುಗಳು ನಿಷೇಧಿತ ಎಂಡಿಎಂಎ ಎಂಬುದು ದೃಢಪಟ್ಟಿದೆ. ಬೆಂಗಳೂರಿನ ಆ ವ್ಯಕ್ತಿಯಿಂದಲೇ ಆರೋಪಿಗಳು ಡ್ರಗ್ಸ್ ಖರೀದಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದ್ದು ಜೊತೆಗೆ ಎಂಡಿಎಂಎ ಮಾದಕ ದ್ರವ್ಯಕ್ಕೆ ಕರಾವಳಿಯಲ್ಲಿ ಭಾರೀ ಬೇಡಿಕೆ ಇರುವುದೂ ಬಹಿರಂಗವಾಗಿದೆ. ಹೀಗಾಗಿ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಬೆನ್ನು ಹತ್ತಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ













