
ಬೆಂಗಳೂರು: ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣವೇ ಕೇಂದ್ರ ಸರ್ಕಾರ ಬೆಲೆ ಏರಿಕೆಯತ್ತ ಮುಖ ಮಾಡಿದ್ದನ್ನು ಟೀಕಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ₹993 ಹೆಚ್ಚಿಸಿರುವುದು ಜನತೆಗೆ ಆಘಾತ ತಂದಿದೆ ಎಂದು ಅವರು ತಿಳಿಸಿದ್ದಾರೆ.
ವಾಣಿಜ್ಯ LPG ದರ ಏರಿಕೆ ಇದಕ್ಕೆ ಆರಂಭ ಮಾತ್ರ ಎಂದು ಎಚ್ಚರಿಸಿರುವ ಅವರು ಇದು “ಮುಂದೈತೆ ಮಾರಿ ಹಬ್ಬ” ಎಂಬುದರ ಸೂಚನೆ. ಚುನಾವಣೆಗಳಿಲ್ಲದ ಹಿನ್ನೆಲೆ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆಗಳೂ ಏರಬಹುದೆಂದು ತಿಳಿಸಿದ್ದಾರೆ.
ಬೆಲೆ ಏರಿಕೆಯ ಪರಿಣಾಮವಾಗಿ ಬೆಂಗಳೂರಿನಲ್ಲಿ ಒಂದು ಕಮರ್ಷಿಯಲ್ ಸಿಲಿಂಡರ್ ₹3152ಕ್ಕೆ ಏರಿಕೆಯಾಗಿದೆ. ಇದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರಕ್ಕೆ ಹೊಡೆತ ಬೀಳಲಿದ್ದು, ಕೊನೆಯಲ್ಲಿ ಗ್ರಾಹಕರೇ ಹೆಚ್ಚುವರಿ ಭಾರ ಹೊರುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಇದರ ಪಕ್ಷಗಳು ಸಣ್ಣ ಪ್ರಮಾಣದಲ್ಲಿ ದರ ಹೆಚ್ಚಳ ಮಾಡುತ್ತಿದ್ದಾಗ ಹಾದಿ ಬೀದಿಯಲ್ಲಿ ಬಂದು ರಂಪ ಮಾಡುವ ಬಿಜೆಪಿಯವರು ಮೋದಿ ಸರಕಾರದ ಬೆಲೆಯೇರಿಕೆಯ ಬಗ್ಗೆ ಬಾಯಿ ಬಿಡುವುದೇ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕ್ರಮವನ್ನು ‘ಹಗಲು ದರೋಡೆ’ ಎಂದು ಅವರು ಟೀಕಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



















