
ಬೆಂಗಳೂರು: ಕಾರ್ಕಳದಿಂದ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ನ ಹಿಂಬದಿಯ ಬಾಗಿಲಿನ ಮೆಟ್ಟಿಲು ತುಂಡಾಗಿ ನೇತುಕೊಂಡು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದ್ದು ಈ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಕಚೇರಿಯಿಂದ (ಸಿಎಂಒ) ಕ್ಷಿಪ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರ ಜತೆಗೆ, ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ @osd_cmkarnataka ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ಸಂದೇಶ ಪ್ರಕಟಿಸುವಂತೆ ಮನವಿ ಮಾಡಿದೆ.
ಪ್ರಸಕ್ತ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಎದುರಾದ ಏರುತಗ್ಗುಗಳ ಪರಿಣಾಮ ಹಿಂದಿನ ಬಾಗಿಲಿನ ಮೆಟ್ಟಿಲು ನೆಲಕ್ಕೆ ಬಡಿದು ತುಂಡಾಗಿದೆ. ಸ್ವಲ್ಪ ದೂರದವರೆಗೆ ನೆಲಕ್ಕೆ ಉಜ್ಜಿಕೊಂಡು ಬಂದಿದ್ದರಿಂದ ಕೀರಲು ಶಬ್ದ ಮಾಡಿದೆ. ತಕ್ಷಣ ಎಚ್ಚೆತ್ತುಕೊಂಡ ನಿರ್ವಾಹಕ ಹಾಗೂ ಚಾಲಕ ಬಸ್ ನಿಲ್ಲಿಸಿ ಪರಿಶೀಲಿಸಿದ್ದಾರೆ. ಬಳಿಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಹಿಂದೆ ಬರುತ್ತಿದ್ದ ಬಸ್‌ಗೆ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿ ತೊಂದರೆಯಾಗಿಲ್ಲ. ಕಾಮಗಾರಿಯಲ್ಲಿದ್ದ ರಸ್ತೆಯ ಏರುತಗ್ಗುಗಳನ್ನು ನಿಭಾಯಿಸುವ ಸಂದರ್ಭ ಮೆಟ್ಟಿಲು ತುಂಡಾಗಿದ್ದೇ ವಿನಃ ಬೇರೆ ಯಾವ ಕಾರಣಗಳಿಂದಲ್ಲ ಎಂಬುದು ಪ್ರಾಥಮಿಕ ನೋಟಕ್ಕೆ ತಿಳಿದುಬಂದಿದೆ. ಆದರೂ ಘಟನೆಗೆ ಸಂಬಂಧಿಸಿ ಸಂಬಂಧಪಟ್ಟ ತಾಂತ್ರಿಕ ಸಿಬ್ಬಂದಿಗಳು, ಮೇಲ್ವಿಚಾರಕರು ಹಾಗೂ ಘಟಕ ವ್ಯವಸ್ಥಾಪಕರಿಗೆ ಈ ಬಗ್ಗೆ ಸಮಜಾಯಿಷಿ ನೀಡುವಂತೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ ಎಂದೂ ಸಿಎಂಒ ಸಂದೇಶದಲ್ಲಿ ಉಲ್ಲೇಖ ಮಾಡಿದೆ.













