26.4 C
Udupi
Monday, June 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 565

ಭರತೇಶ ಶೆಟ್ಟಿ, ಎಕ್ಕಾರು

ಇತ್ತ ಮಣಿಪುರದ ರಣಭೂಮಿಯಲ್ಲಿ ಅನ್ನ ಆಹಾರಗಳನ್ನು ತೊರೆದು ಬಬ್ರುವಾಹನ, ಚಿತ್ರಾಂಗದೆ, ಉಲೂಪಿಯರು ನಿರಶನ ವೃತಧಾರಿಗಳಂತೆ ಮೃತ ಶರೀರ ಕಾಯುತ್ತಿದ್ದಾರೆ. ಅಲ್ಲಿಗೆ ಪುಂಡರೀಕ ಬರಿಗೈಯಲ್ಲಿ ಬಂದು ನಡೆದು ಹೋದ ವೃತ್ತಾಂತಗಳನ್ನೆಲ್ಲಾ ವಿವರಿಸಿ ಹೇಳಿ ನೊಂದು ನಿಂತನು.

ಪುಂಡರೀಕನ ಮಾತುಗಳನ್ನು ಕೇಳುತ್ತಿದ್ದಂತೆ ಚಿತ್ರಾಂಗದೆ ಪತಿಯಳಿದ ಮೇಲೆ ನಾನೇಕೆ ಬದುಕಿರಬೇಕು. ಅಗ್ನಿಪ್ರವೇಶಗೈದು ದೇಹತ್ಯಾಗ ಮಾಡುತ್ತೇನೆ ಎಂದು ಹೊರಟು ನಿಂತಳು.

ವೀರ ಬಬ್ರುವಾಹನ ಅಮ್ಮನನ್ನು ತಡೆದು “ತಾಯೇ ನಾನಿನ್ನೂ ಬದುಕಿದ್ದೇನೆ. ನಮಗೆ ಬೇಕಾದ ಕಾರ್ಯ ಸಾಧನೆಗೆ ಪೂರ್ಣ ಪ್ರಯತ್ನ ಮಾಡದೆ ಅರ್ಧದಲ್ಲೇ ಆತುರದ ನಿರ್ಣಯ ಕೈಗೊಳ್ಳದಿರು. ಸತ್ತು ಬಿದ್ದಿರುವಾತ ನನಗೆ ಅಪ್ಪ ಮಾತ್ರ ಅಲ್ಲ, ಶ್ರೀಕೃಷ್ಣ ಪರಮಾತ್ಮನ ಸಖ, ಇಂದ್ರಜಾತ. ಹಾಗಾಗಿ ದೇವರ ದಯೆಯೂ ನಮಗಿದೆ ಎಂಬುವುದು ನಿಸ್ಸಂಶಯ. ಒಂದು ಸತ್ಕಾರ್ಯ ಸಾಗುವಾಗ ವಿಪತ್ತುಗಳು ಪರೀಕ್ಷೆಗಳಂತೆ ಎದುರಾಗುತ್ತವೆ. ಈ ಪುಣ್ಯಪ್ರದ ಅಶ್ವಮೇಧ ಯಾಗದಲ್ಲೂ ಧನುರ್ಧರ ಧನಂಜಯನಿಗೆ ಸತ್ವ ಪರೀಕ್ಷೆ ಎದುರಾಗಿದೆ. ಆತನ ಮಗನಾಗಿ ಅಪ್ಪನನ್ನು ಬದುಕಿಸುವ ದಾರಿ ಅರಿತ ಮೇಲೆ ಸಾಧಿಸದೆ ಬಿಡಲಾರೆ. ಅಡ್ಡಿಯಾಗಿ ದೇವರು, ದೈತ್ಯರು ಯಾರೇ ಬರಲಿ ಅಂಜದೆ ಅಳುಕದೆ ಅವರನ್ನು ದೆಸೆಗೆಡಿಸಿ ಮುನ್ನುಗ್ಗಿ ಪಾತಾಳವನ್ನು ಭೇದಿಸಿ ಸಂಜೀವಕ ಮಣಿ ತರುತ್ತೇನೆ. ಆವರೆಗೆ ನೀವು ತಾಳ್ಮೆಯಿಂದ ಕಾಯುತ್ತಿರಬೇಕು” ಎಂದು ವೀರಾವೇಶದಿಂದ ಅಬ್ಬರಿಸಿ ಧನುರ್ಧಾರಿಯಾಗಿ ಎದ್ದು ನಿಂತನು.

ವೀರ ಬಬ್ರುವಾಹನ ರಣಭಯಂಕರನಾಗಿದ್ದಾನೆ. ಮಂತ್ರಪೂರಿತ ವಜ್ರಾಸ್ತ್ರವನ್ನು ಪಾತಾಳಕ್ಕೆ ರಹದಾರಿ ನಿರ್ಮಿಸುವಂತೆ ಸಂಕಲ್ಪ ಮಾಡಿ ಅಕರ್ಣಾಂತ ಸೆಳೆದು ಪ್ರಯೋಗ ಮಾಡಿದನು. ಶ್ರೀಹರಿಯ ಸುದರ್ಶನ ಚಕ್ರದಂತೆ ಗಿರಗಿರನೆ ತಿರುಗುತ್ತಾ ಭೂಗರ್ಭವನ್ನು ಸೀಳುತ್ತಾ ಪಾತಾಳಕ್ಕೆ ಗುಹಾ ಮಾರ್ಗವನ್ನು ನಿರ್ಮಾಣ ಮಾಡಿಯೇ ಬಿಟ್ಟಿತು. ಅಲ್ಲಿಗೆ ಉಪಶಮನವಾಗದ ಶರ ತನಗೆದುರಾದ ನಾಗಗಳ ಶಿರ ಚೆಂಡಾಡುತ್ತಾ ಸಾಗಿ ಬಿಟ್ಟಿತ್ತು. ಇಷ್ಟರಿಂದಲೇ ಇದು ಯಾರು ಮಾಡಿದ ಕೃತ್ಯ ಎಂಬ ಪ್ರಶ್ನೆಗೆ ಉತ್ತರವಾಗಿ ಬಬ್ರುವಾಹನನೇ ಸೇನಾ ಸಹಿತನಾಗಿ ಆಕ್ರಮಿಸಲು ಬರುತ್ತಿರುವ ವರ್ತಮಾನ ನಾಗಲೋಕಕ್ಕೆ ಮುಟ್ಟಿತ್ತು. ಧೃತರಾಷ್ಟ್ರ ಸಹಿತ ತಕ್ಷಕ, ಕಾರ್ಕೋಟಕಾದಿ ನಾಗಗಳು ಆದಿಶೇಷನ ಬಳಿಗೈದು ದೂರಿತ್ತು ಎದುರಿಸುವ ವ್ಯವಸ್ಥೆ ಮಾಡಿಸಲು ಕೇಳಿಕೊಂಡರು. ಆದಿಶೇಷನು ಧೃತರಾಷ್ಟ್ರನನ್ನು ಆತನ ಉದ್ದಟತನಕ್ಕೆ ಹಳಿದು ನಾಗಲೋಕದ ಸರ್ಪಸೇನೆಯನ್ನು ಯುದ್ಧಕ್ಕೆ ಕಳುಹಿಸಿದನು. ಮಣಿಪುರದ ಸೇನೆಯ ಮೇಲೆ ವಿಷಜ್ವಾಲೆಯನ್ನು ಬುಸುಗುಡುತ್ತಾ ಹಬ್ಬತೊಡಗಿದವು ನಾಗಗಳು. ಮುಂಚೂಣಿಯಲ್ಲಿದ್ದ ಸೇನೆ ವಿಷದ ಬೇಗೆಗೆ ಹತಪ್ರಾಣರಾಗಿ ಧರೆಗುರುಳತೊಡಗಿದರು. ಕ್ರೋಧಾವೇಶಕ್ಕೊಳಗಾದ ಬಬ್ರುವಾಹನ ಅಕ್ಷಯ ಶರಗಳನ್ನೆಸೆದು ಅಸಂಖ್ಯ ನಾಗಗಳ ಹೆಡೆಗಡಿದಾಗ ಅವುಗಳ ಮಣಿಗಳು ಪಟಪಟನೆ ನಕ್ಷತ್ರಗಳುದುರಿದಂತೆ ಬೀಳತೊಡಗಿದವು. ಆದರೆ ಒಂದೆಡೆ ಹಿನ್ನಡೆಯಾದರೂ, ಮತ್ತೊಂದೆಡೆಯಲ್ಲಿ ನಾಗಗಳು ಮಣಿಪುರದ ಸೇನೆಯ ನಾಶ ಮಾಡತೊಡಗಿದ್ದವು.

ಬಬ್ರುವಾಹನ ಯೋಚನೆ ಮಾಡತೊಡಗಿದ. ಹೀಗೆಯೇ ಮುಂದುವರಿದರೆ ಕಾರ್ಯ ಕೈಗೂಡದು. ವೃತ್ತಾಕಾರವಾಗಿ ಮುತ್ತಿರುವ ನಾಗಗಳನ್ನು ಮಣಿಸುವ ರಣತಂತ್ರ ಯೋಜಿಸಲೇ ಬೇಕೆಂದು ತೀರ್ಮಾನಿಸಿದ. ಮಂತ್ರಶರ ಅಭಿಮಂತ್ರಿಸಿ ಗಗನ ಮುಖಿಯಾಗಿ ಪ್ರಯೋಗಿಸಿದ. ಕೂಡಲೇ ಸೇನೆಯ ಸುತ್ತ ಕೋಟೆಯಂತೆ ರಣಹದ್ದು, ನವಿಲು, ಸಾರಂಗಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೃಷ್ಟಿಯಾದವು. ಹದ್ದುಗಳು ಹಾರಿ ಮುಂದೊತ್ತಿ ಬರುವ ಹಾವುಗಳನ್ನು ಕಚ್ಚಿ ಕೊಂದರೆ, ನವಿಲುಗಳು ಕುಕ್ಕಿ ಕಣ್ಣುಗಳನ್ನೇ ಕೀಳತೊಡಗಿದವು. ಸಾರಂಗಗಳು ಮನಬಂದಂತೆ ಓಡತೊಡಗಿದವು. ಹಾವುಗಳು ಜಿಂಕೆಗಳ ಕಾಲಿನ ಗೊರಸಿನಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡವು. ಇಷ್ಟಾಗುತ್ತಲೇ ನಿಲ್ಲದ ಚಾಣಾಕ್ಷ ಬಬ್ರುವಾಹನ ಮಧು ಅಸ್ತ್ರವನ್ನು ಅಭಿಮಂತ್ರಿಸಿ ಜೇನು ತುಪ್ಪದ ಮಳೆಗರೆದನು. ಗಾಯಗೊಂಡ ಹಾವುಗಳ ಮೇಲೆ ಮಧು ಮಳೆ ಸುರಿದು ತೋಯ್ದು ಹೋದವು. ಅದರ ಬೆನ್ನಿಗೆ ಪಿಪೀಲಿಕಾಸ್ತ್ರ ಪ್ರಯೋಗಿಸಿ ಕೋಟಿ ಕೋಟಿ ಸಂಖ್ಯೆಯ ಕಟ್ಟಿರುವೆಗಳನ್ನು ರಣಭೂಮಿಯಲ್ಲಿ ರಾಶಿ ರಾಶಿ ಬೀಳುವಂತೆ ಮಾಡಿದನು. ಗಾಯಗೊಂಡ ಹಾವಿನ ರಕ್ತದ ಜೊತೆ ಜೇನು ಸೇರಿತ್ತು. ಇರುವೆಗಳು ಮುತ್ತಿ ಸಮಸ್ತ ನಾಗಗಳನ್ನು ಕಚ್ಚಿ ಕೊರೆದು ತಿಂದು ಬರೇ ಅಸ್ಥಿಪಂಜರ ಮಾಡಿ ಬಿಟ್ಟವು. ಹುಣಸೆ ಹಣ್ಣಿನ ಮಾಂಸ ಸುಲಿದರೆ ಹೇಗೆ ಬೀಜ ಮಾತ್ರ ಉಳಿಯುವುದೋ ಹಾಗೆ ಪಕ್ಕೆಲುಬು ಕಶೇರುಕಗಳಷ್ಟೇ ಉಳಿದು ಹೋಯಿತು. ಸೋತು ಅಳಿದುಳಿದು ಓಡಿ ಜೀವ ಉಳಿಸಿಕೊಂಡ ನಾಗಗಳು ಆದಿಶೇಷನ ಬಳಿ ಬಂದು ಪರಾಜಯದ ಸುದ್ದಿ, ಬಬ್ರುವಾಹನನ ಅತಿಶಯ ಪರಾಕ್ರಮದ ವಿಚಾರ ವಿವರಿಸಿ ರಕ್ಷಣೆ ಬೇಡಿದರು.

ಆದಿಶೇಷನು ಈ ವರ್ತಮಾನ ಕೇಳಿಯೂ ವಿಚಲಿತನಾಗದೆ “ಅಯ್ಯಾ ನಾಗಗಳೇ, ಮಂತ್ರಜ್ಞರಾದ ಮನುಷ್ಯರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಲ್ಲರು. ಸಾಮಾನ್ಯ ಮನುಷ್ಯ, ರಾಕ್ಷಸ, ಕಿನ್ನರ, ಗಂಧರ್ವ, ಕಿಂಪುರುಷಾದಿಗಳಿಗೆ ನಾಗಲೋಕ ಅಭೇಧ್ಯವಾದುದೇ ಆಗಿದೆ. ಆದರೆ ಈ ಪ್ರಕರಣದಲ್ಲಿ ಶ್ರೀಹರಿಯೇ ಕೃಷ್ಣ ರೂಪದಲ್ಲಿ ಅವತರಿಸಿ ಅರ್ಜುನನ ರಕ್ಷಕನಾಗಿರುವಾಗ ಬಬ್ರುವಾಹನ ಈ ಸಾಧನೆ ಮೆರೆಯಲು ಪೂರಕವಾಗಿದೆ. ಅನ್ಯ ಯಾವ ಬಲವಿದ್ದರೂ ದೈವಬಲವಿಲ್ಲದಿದ್ದರೆ ಕಾರ್ಯ ಸಾಧನೆಯಾಗದು. ದೈವಬಲ ಒಂದಿಲ್ಲದಿದ್ದರೆ, ಅನ್ಯ ಯಾವ ಮಹಾಬಲಗಳಿದ್ದರೂ ನಿರರ್ಥಕವೇ ಆಗಿ ಹೋಗುತ್ತದೆ. ಸತ್ಕರ್ಮ, ಧರ್ಮ ಪಾಲನೆಗೆ ದೈವಬಲ ಯಾವಾಗಲೂ ಕೂಡಿ ಬರುತ್ತದೆ. ಆರಂಭ ಕಷ್ಟ ಎಂದು ಕಂಡರೂ, ಪ್ರಯತ್ನಿಸಿದರೆ ಹೆಜ್ಜೆ ಹೆಜ್ಜೆಯಲ್ಲೂ ಅದೇ ಮುನ್ನಡೆಸಿ ಗುರಿ ಸಾಧನೆ ಮಾಡಿಸುವ ಗುರುವಾಗುತ್ತದೆ ನಾವು ಅರಿತು ಅಪರಾಧ ಮಾಡಿದ ಕಾರಣ ಶಿಕ್ಷೆ ಅನುಭವಿಸಬೇಕಾಯಿತು. ಈಗ ಹೇಳಿ ನಿಮ್ಮ ಅಭಿಪ್ರಾಯ ಸಲಹೆಗಳೇನು?

“ಆದಿಶೇಷಾ! ಒಮ್ಮೆ ಸಂಜೀವಕ ಮಣಿಯನ್ನು ಬಬ್ರುವಾಹನನಿಗಿತ್ತು ಅಳಿದುಳಿದ ನಾಗ ಸಂಕುಲವನ್ನು ಉಳಿಸು. ಆ ಗರುಡ ನಮ್ಮ ಶತ್ರುವಾದರೂ ಮಿತ ನಾಶ ಮಾಡಬಲ್ಲ. ಈ ಬಬ್ರುವಾಹನ ಸರ್ವನಾಶವನ್ನೇ ಲೀಲಾಜಾಲವಾಗಿ ಮಾಡಿ ಪೂರೈಸುತ್ತಿದ್ದಾನೆ. ಹೀಗೆ ಮುಂದುವರಿದರೆ ಸೃಷ್ಟಿಯಲ್ಲಿ ನಾಗ ಸಂಕುಲವೇ ಇನ್ನಿಲ್ಲವಾಗಿ ಹೋದೀತು. ನಮ್ಮಿಂದಾದ ಅಪರಾಧವನ್ನು ಮನ್ನಿಸಿ ನಾಗ ಸಂಕುಲವನ್ನು ರಕ್ಷಿಸಲು ನೀನೇ ಮುಂದಾಗಬೇಕು” ಎಂದು ಬೇಡಿ ಕೊಂಡರು.

ಅಷ್ಟರಲ್ಲಾಗಲೇ ಬಬ್ರುವಾಹನ ಆದಿಶೇಷನಲ್ಲಿಗೆ ಬಂದು ಮುಟ್ಟಿಯಾಯಿತು. ನೋಡಿದ ಆದಿಶೇಷ “ಹೇ ವೀರ ಕುಮಾರನೇ, ಸೈರಿಸು. ಪತಂಗವೊಂದು ದೀಪದ ಜ್ವಾಲೆಯನ್ನು ಕಂಡು ಆಕರ್ಷಣೆಗೊಳಗಾಗಿ ತನ್ನನ್ನು ತಾನೇ ಸುಟ್ಟುಕೊಳ್ಳುವಂತಹ ಅವಿವೇಕ ನಮ್ಮಿಂದಾಯಿತು. ಶ್ರೀಹರಿಯೆಂಬ ದೀಪ ಜ್ವಾಜಾಲ್ಯಮಾನವಾಗಿ ಬೆಳಗುತ್ತಾ ನಮ್ಮೆಲ್ಲರನ್ನೂ ಸೆಳೆಯಿತು. ಈ ವಿಚಾರ ಮೊದಲೇ ತಿಳಿದಿದ್ದ ಕಾರಣ ನಾವು ಮಾಡಿದ್ದು ಮಹಾಪರಾಧ. ಈ ಸಂಜೀವಕ ಮಣಿ ಅತಿ ಶ್ರೇಷ್ಟವಾದುದೇ ಹೌದು. ಆದರೆ ಶ್ರೀಹರಿಯೇ ನಿಮ್ಮೊಂದಿಗಿರುವಾಗ ಈ ಸೃಷ್ಟಿಯ ದಿವ್ಯ ವಸ್ತುಗಳಾದ ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ, ಸಂಜೀವಕ ಮಣಿ ಇತ್ಯಾದಿ ಪ್ರತ್ಯೇಕವಾಗಿ ಬೇಕಾದೀತೇ? ನಾವು ಮಾಡಿದ ಅಪರಾಧಕ್ಕೆ ಕೇವಲ ಮಣಿಯನ್ನು ನೀಡಿದರೆ ಪ್ರಾಯಶ್ಚಿತ್ತವಾಗದು. ಸ್ವಯಂ ನಾನೇ ಮಣಿಧರನಾಗಿ ಬಂದು ನಿಮ್ಮ ಉದ್ದೇಶಿತ ನೆಪ ಮಾತ್ರವಾದ ಕಾರ್ಯವನ್ನು ಕೈಗೂಡಿಸುತ್ತೇನೆ. ಭಕ್ತವತ್ಸಲ, ಭಕ್ತರಾಧೀನನಾದ ಶ್ರೀಕೃಷ್ಣ ಪರಮಾತ್ಮ ಆ ಸಮಯ ಒಲಿದು ಸಾಕ್ಷಾತ್ಕಾರಗೊಂಡರೆ ದರ್ಶನ ಪಡೆದು ನಮ್ಮಿಂದಾದ ಅಪರಾಧವನ್ನು ತೊಳೆದುಕೊಳ್ಳಬೇಕು.” ಹೀಗೆ ಹೇಳಿ ರಾಜ ಮರ್ಯಾದೆಯ ವೈಭವದೊಂದಿಗೆ ನಾಗಲೋಕದ ಅನರ್ಘ್ಯ ರತ್ನಾದಿಗಳನ್ನು ಬಬ್ರುವಾಹನನಿಗೆ ಕೊಡುಗೆಯಾಗಿತ್ತನು. ಆ ಬಳಿಕ ಪನ್ನಗಾಧಿಪ ಆದಿಶೇಷನೇ ಜೊತೆಯಾಗಿ ಮಣಿಪುರದತ್ತ ಮಣಿಯನ್ನು ಹೊತ್ತು ತಂದನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page