
ಮುಂಬೈ: ಇಂದು ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಏಕನಾಥ್ ಶಿಂಧೆ, ಅಜಿತ್ ಪವಾರ್ಗೆ ಡಿಸಿಎಂ ಹುದ್ದೆಯನ್ನೆ ಮುಂದುವರಿಸಲಿದ್ದಾರೆ. ಸಿಎಂ ಕುರ್ಚಿಗಾಗಿ ಬಿಜೆಪಿ ಸಂಬಂಧವನ್ನು ಮುರಿದುಕೊಂಡಿದ್ದ ಉದ್ಧವ್ ಠಾಕ್ರೆಗೆ ಈಗ ನೆಲೆಯೇ ಇಲ್ಲದಂತೆ ಫಡ್ನವೀಸ್ ಮಾಡಿದ್ದಾರೆ. ಅಂದು ಶಿವಸೇನೆಯ ನಡೆಯಿಂದ ಸಿಎಂ ಸ್ಥಾನದಿಂದ ವಂಚಿತರಾಗಿದ್ದ ದೇವೇಂದ್ರ ಫಡ್ನವೀಸ್ ಈಗ ಮತ್ತೊಮ್ಮೆ ಮಹಾರಾಷ್ಟ್ರದ ಸಿಎಂ ಆಗುತ್ತಿದ್ದು, ಐದು ವರ್ಷದಲ್ಲಿ ತಮ್ಮ ತಾಕತ್ತು ಏನು ಎಂಬುದನ್ನು ಉದ್ಧವ್ ಠಾಕ್ರೆ ಸೇರಿ ಮಹಾ ವಿಕಾಸ್ ಅಘಾಡಿಗೆ ತೋರಿಸಿದ್ದಾರೆ. ಈ ಮೂಲಕ ಐದು ವರ್ಷದ ಹಿಂದೆ ಸಮುದ್ರದಂತೆ ನಾನು ವಾಪಸ್ ಬರುತ್ತೇನೆ ಎಂದು ಮಾಡಿದ್ದ ಶಪಥವನ್ನು ಇದೀಗ ನಿಜ ಮಾಡಿದ್ದಾರೆ.
ಮುಂಬೈನ ಆಜಾದ್ ಮೈದಾನದಲ್ಲಿ ಇಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು, ಸಂಜೆ 5:30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಬುಧವಾರ ರಾಜಭವನಕ್ಕೆ ಭೇಟಿ ನೀಡಿದ್ದ ಮಹಾಯುತಿ ಮೈತ್ರಿಕೂಟದ ನಾಯಕರು ಸರಕಾರ ರಚನೆಗೆ ರಾಜ್ಯಪಾಲರಿಗೆ ಹಕ್ಕು ಮಂಡಿಸಿದ ನಂತರ, ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾಯುತಿ ಸರ್ಕಾರ ರಚನೆಗೆ ಹಕ್ಕು ಸಾಧಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರನ್ನು ಬೆಂಬಲಿಸಿದ್ದಕ್ಕಾಗಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಕೂಡ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು.



















