
ಹೊಸದಿಲ್ಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಾಗಪುರದಲ್ಲಿ ರಸ್ತೆ ಸುರಕ್ಷ ಕಾರ್ಯಕ್ರಮದಲ್ಲಿ ಮಾತನಾಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ 25,000ರೂ. ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಅಪಘಾತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ 5 ಸಾವಿರ ರೂ. ಬಹುಮಾನ ಸಾಲುತ್ತಿಲ್ಲವಾದ್ದರಿಂದ ಇವರಿಗೆ 25 ಸಾವಿರ ರೂ. ನೀಡಲಾಗುವುದು. ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ 1.5 ಲಕ್ಷ ರೂ.ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಕೇಂದ್ರ ಸರಕಾರ ಭರಿಸಲಿದೆ. ಇದು ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡವರಿಗೂ ಅನ್ವಯಿಸಲಿದೆ ಎಂದು ಮಾಹಿತಿ ನೀಡಿದರು.



















