
ನವದೆಹಲಿ: ಒಲಿಂಪಿಯನ್ ವಿನೇಶ್ ಫೋಗಟ್ ಅವರು ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಗಂಭೀರ ಆರೋಪ ಮಾಡಿದ್ದಾರೆ.
ಭದ್ರತೆಯನ್ನು ಹಿಂತೆಗೆದುಕೊಂಡಿರುದರಿಂದ ಕುಸ್ತಿಪಟುಗಳು ಸುರಕ್ಷಿತವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಸಾಕ್ಷ್ಯಗಳನ್ನು ನೀಡುವ ಅವರ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆದ್ರೆ ವಿನೇಶ್ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದು ಇದಕ್ಕೂ ಮುನ್ನ ಕುಸ್ತಿಪಟುಗಳು ದೆಹಲಿ ನ್ಯಾಯಾಲಯ ಸಂಪರ್ಕಿಸಿದ್ದರು. ಬಳಿಕ ಕೋರ್ಟ್ ತಕ್ಷಣವೇ ಭದ್ರತಾ ಕವಚ ಮರುಸ್ಥಾಪಿಸುವಂತೆ ನಗರ ಪೊಲೀಸರಿಗೆ ಸೂಚಿಸಿತ್ತು. ಬಳಿಕ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಕುಸ್ತಿಪಟುಗಳಿಗೆ ಒದಗಿಸಲಾದ ಭದ್ರತೆಯನ್ನು ಹಿಂತೆಗೆದುಕೊಂಡಿಲ್ಲ. ಭವಿಷ್ಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ವಿನಂತಿಸಲು ನಿರ್ಧರಿಸಲಾಗಿದೆ. ಆದ್ರೆ ನಿಯೋಜಿತ ದೆಹಲಿ ಪೊಲೀಸ್ ಪಿಎಸ್ಒಗಳು ಈ ನಿರ್ಧಾರವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಗುರುವಾರ ವರದಿ ಮಾಡಲು ತಡಮಾಡಿದ್ದಾರೆ, ಗೊಂದಲವನ್ನು ಸರಿಪಡಿಸಿದ್ದೇವೆ ಎಂದು ಮಾಹಿತಿ ನೀಡಿದರು.


































