
ದುಬೈ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ಓಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ವಿಚಾರಣೆ ವೇಳೆ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ.
ಸೌದಿ ಅರೇಬಿಯಾ ಹಾಗೂ ಯುಎಇ ತನಿಖಾಧಿಕಾರಿಗಳ ವಿಚಾರಣೆಯಲ್ಲಿ, ವಿಮಾನವನ್ನು ಇಸ್ರೇಲ್ ನೆಲಕ್ಕೆ ಅಪ್ಪಳಿಸಿ ಭೀಕರ ದುರಂತ ಸೃಷ್ಟಿಸುವ ಉದ್ದೇಶ ಹೊಂದಿದ್ದಾಗಿ ಹಮ್ಮಾಮಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಹಾರಾಟದ ವೇಳೆ ಪ್ರಾರ್ಥನೆ ಮಾಡಲು ಅನುಮತಿ ಕೇಳಿದ ಹಮ್ಮಾಮಿ, ಸ್ಮಿತ್ ಒಪ್ಪಿಗೆ ನೀಡುತ್ತಿದ್ದಂತೆ ಕಾಕ್‌ಪಿಟ್‌ನಲ್ಲಿದ್ದ ಕೊಡಲಿಯಿಂದ ಅವರ ತಲೆಯ ಹಿಂಭಾಗಕ್ಕೆ ದಾಳಿ ನಡೆಸಿದ್ದಾನೆ. ಸತತ ಹೊಡೆತಗಳಿಂದ ಗಾಯಗೊಂಡರೂ ಸ್ಮಿತ್ ಧೈರ್ಯದಿಂದ ಕಾಕ್‌ಪಿಟ್ ಬಾಗಿಲನ್ನು ತೆರೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ.
ಆರಂಭದಲ್ಲಿ ವಿಮಾನಕ್ಕೆ ತಾಂತ್ರಿಕ ಸಮಸ್ಯೆಯಾಗಿರಬಹುದು ಎಂದು ಭಾವಿಸಿದ್ದ ಸ್ಮಿತ್, ಬಳಿಕ ತಮ್ಮ ಪಕ್ಕದಲ್ಲಿದ್ದ ಸಹ-ಪೈಲಟ್ ದಾಳಿ ನಡೆಸುತ್ತಿರುವುದು ಅರಿವಾಯಿತು ಎಂದು ತಿಳಿಸಿದ್ದಾರೆ. ರಕ್ತಸ್ರಾವವಾಗುತ್ತಿದ್ದರೂ ಪ್ರಯಾಣಿಕರ ಸುರಕ್ಷತೆಗಾಗಿ ಅವರು ಪ್ರತಿರೋಧ ತೋರಿದ್ದಾರೆ.
ಹಮ್ಮಾಮಿ ಓಮನ್ ಪ್ರಜೆಯಾಗಿದ್ದರೂ, ಆತನ ತಾಯಿ ಸಿರಿಯಾ ಮೂಲದವರಾಗಿದ್ದು, ಸಿರಿಯಾದಲ್ಲಿ ಹೆಚ್ಚಿನ ಸಮಯ ಕಳೆದಿದ್ದನು. ಅಲ್ಲಿಯೇ ಆತ ತೀವ್ರಗಾಮಿ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದ ಎಂದು ವರದಿಯಾಗಿದೆ.
2024ರಲ್ಲಿ ‘ಓಮನ್ ಏರ್’ನಲ್ಲಿ ಸಹ-ಪೈಲಟ್ ಆಗಿದ್ದಾಗ ಹಮ್ಮಾಮಿ ಬಳಿ ಉಗ್ರಗಾಮಿ ಸಾಹಿತ್ಯ ಮತ್ತು ಸಾಮಗ್ರಿಗಳು ಪತ್ತೆಯಾಗಿದ್ದವು ಎನ್ನಲಾಗಿದ್ದು, ಬಳಿಕ ಆತನಿಗೆ ಹಾರಾಟ ನಿರ್ಬಂಧಿಸಲಾಗಿತ್ತು. ಆದರೂ ಆತ ಫ್ಲೈದುಬೈನಲ್ಲಿ ಹೇಗೆ ಕೆಲಸ ಪಡೆದ ಎಂಬುದು ಇದೀಗ ತನಿಖೆಯ ಪ್ರಮುಖ ಪ್ರಶ್ನೆಯಾಗಿದೆ.
ಇಸ್ರೇಲ್ ಮಾರ್ಗದ ವಿಮಾನಕ್ಕೆ ಆತನನ್ನು ನಿಯೋಜಿಸಿದ್ದರ ಕುರಿತು ಮೊಸಾದ್ ಹಾಗೂ ಯುಎಇ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಯುಎಇ ಮೂಲಗಳ ಪ್ರಕಾರ, ಇದನ್ನು ವ್ಯವಸ್ಥಿತ ಭಯೋತ್ಪಾದಕ ಕೃತ್ಯದ ಭಾಗವಾಗಿ ಪರಿಗಣಿಸಲಾಗುತ್ತಿದೆ.
174 ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಅವರ ಸಾಹಸವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದು, ಮುಂಬರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯ ಗೌರವ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.
ಈ ಘಟನೆಯಲ್ಲಿ ಕಾಕ್‌ಪಿಟ್‌ನ ತುರ್ತು ಬಳಕೆಗೆ ಇರಿಸಲಾಗಿದ್ದ ‘ಕ್ರ್ಯಾಶ್ ಆಕ್ಸ್’ ಅನ್ನು ದಾಳಿಗೆ ಬಳಸಿರುವುದು ಕೂಡ ಗಮನ ಸೆಳೆದಿದೆ. ಇದರಿಂದ ವಿಮಾನಯಾನ ಕ್ಷೇತ್ರದಲ್ಲಿ ಕಾಕ್‌ಪಿಟ್ ಸುರಕ್ಷತಾ ಕ್ರಮಗಳ ಕುರಿತು ಮರುಪರಿಶೀಲನೆಗೆ ಚರ್ಚೆ ಆರಂಭವಾಗಿದೆ.






















