ಮದ್ಯದ ಬಾಟಲ್ ಮಾದರಿಯಲ್ಲಿ ಉಪ್ಪಿನ ಪ್ಯಾಕೆಟ್ಗೂ ಎಚ್ಚರಿಕೆ ಸ್ಟಿಕ್ಕರ್..!

ಬೆಂಗಳೂರು: ಉಪ್ಪಿನ ಅತಿಯಾದ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಲು ಮುಂದಾಗಿದೆ.
ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾಗಿದ್ದು, ಈ ಬಗ್ಗೆ ಮಾರ್ಗಸೂಚಿ ಜಾರಿಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು.
ಆರೋಗ್ಯಕ್ಕೆ ಪೂರಕವಾದ ಉಪ್ಪು ಮಾರುಕಟ್ಟೆಯಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮಾರ್ಗಸೂಚಿ ರೂಪಿಸಲಾಗುತ್ತಿದೆ. ಮದ್ಯದ ಬಾಟಲಿಗಳ ಮೇಲಿರುವಂತೆ ಉಪ್ಪಿನ ಪ್ಯಾಕೆಟ್ಗಳ ಮೇಲೂ ಅತಿಯಾದ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಎಚ್ಚರಿಕೆ ಸಂದೇಶ ಅಥವಾ ಸ್ಟಿಕ್ಕರ್ ಅಳವಡಿಸುವ ಚಿಂತನೆ ಇದೆ ಎಂದರು.
ಅತಿಯಾದ ಉಪ್ಪಿನ ಸೇವನೆಯಿಂದ ರಕ್ತದೊತ್ತಡ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಸಚಿವರು ಹೇಳಿದರು. ಅಗತ್ಯವಿರುವಷ್ಟು ಮಾತ್ರ ಉಪ್ಪು ಸೇವಿಸುವ ಕುರಿತು ಜನರಲ್ಲಿ ಅರಿವು ಮೂಡಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ಉಪ್ಪಿನ ಬೆಲೆ ಹೆಚ್ಚಾದರೂ ಪರವಾಗಿಲ್ಲ, ಜನರು ಕಡಿಮೆ ಪ್ರಮಾಣದಲ್ಲಿ ಬಳಸುವಂತಾಗಬೇಕು. ಉಪ್ಪನ್ನು ಔಷಧಿಯಂತೆ ಮಿತವಾಗಿ ಬಳಸಬೇಕು ಎಂದು ಖಾದರ್ ಸಲಹೆ ನೀಡಿದರು.
ಶಾಲಾ-ಕಾಲೇಜುಗಳಿಗೂ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದ್ದು ತಜ್ಞರ ಸಂಶೋಧನೆ ಮತ್ತು ಸಲಹೆಗಳ ಆಧಾರದ ಮೇಲೆ ಆರೋಗ್ಯಕ್ಕೆ ಹಾನಿಕರವಾದ ಆಹಾರ ಪದ್ಧತಿಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.



































