ಆಸ್ಪತ್ರೆಯಲ್ಲಿ ಯುವಕ ಆತ್ಮಹತ್ಯೆ,
10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರದೀಪ್ ಅವರ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ 10ಕ್ಕೂ ಹೆಚ್ಚು ಜನರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರ್ಡೂರಿನ ದಿಲೀಪ್ ಕುಮಾರ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ, ಸನತ್, ಹೊರ ರಾಜ್ಯದ ಇಬ್ಬರು ಕಾರ್ಮಿಕರು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಪ್ರದೀಪ್ ಕಳೆದ 8 ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಅ. 27ರಂದು ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಶ್ರಾವ್ಯ ಅವರ ಸಹೋದರರು ಹಾಗೂ ಇತರರು ಮೂರು ಕಾರುಗಳಲ್ಲಿ ಬಂದು ಅವರನ್ನು ಬಲವಂತವಾಗಿ ಮನೆಗೆ ಕರೆದೊಯ್ದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಷಯ ತಿಳಿದ ದಿಲೀಪ್ ಕುಮಾರ್ ತಮ್ಮ ಸ್ನೇಹಿತರನ್ನು ಸ್ಥಳಕ್ಕೆ ಕಳುಹಿಸಿದ್ದು, ಅವರು ಬಂದಾಗ ಪ್ರದೀಪ್ ಮೇಲೆ ಹಲ್ಲೆ ನಡೆಯುತ್ತಿರುವುದು ಕಂಡುಬಂದಿತ್ತು. ಬಳಿಕ ಹಲ್ಲೆ ನಿಲ್ಲಿಸಲಾಗಿತ್ತು.
ಅ. 28ರಂದು ಗಾಯಗೊಂಡ ಪ್ರದೀಪ್ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಡೆದ ಹಲ್ಲೆ ಹಾಗೂ ಆರೋಪಿಗಳ ಬೆದರಿಕೆ ಕುರಿತು ಸಹೋದರನ ಬಳಿ ಹೇಳಿಕೊಂಡಿದ್ದರು.
ಘಟನೆಯಿಂದ ಮನನೊಂದ ಪ್ರದೀಪ್ ಅ. 30ರಂದು ಸಂಜೆ 5.30ಕ್ಕೆ ಆಸ್ಪತ್ರೆಯ ಶೌಚಾಲಯದಲ್ಲಿ ಕುತ್ತಿಗೆಗೆ ಬಿಳಿ ಬಣ್ಣದ ಟ್ಯಾಗ್ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























