ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಬಂಧನ

ಉಡುಪಿ: ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರ ವಿಶೇಷ ತಂಡ ರಚಿಸಲಾಗಿತ್ತು. ನ.3ರಂದು ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಬಳಿ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪವನ್ ಕುಮಾರ್ (24) ಹಾಗೂ ಅಪ್ರಾಪ್ತ ಬಾಲಕನನ್ನು ತಂಡ ವಶಕ್ಕೆ ಪಡೆದಿತ್ತು. ನ.5ರಂದು ಪವನ್ ಕುಮಾರ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪ್ರಾಪ್ತನನ್ನು ಪರಿವೀಕ್ಷಣಾಲಯದಲ್ಲಿ ಇರಿಸಲಾಗಿದೆ.
ಇನ್ನು ಪ್ರಕರಣದ ಉಳಿದ ಆರೋಪಿಗಳಾದ ವರಂಗ ಗ್ರಾಮದ ಮುನಿಯಾಲು ನಿವಾಸಿಗಳಾದ ಆದರ್ಶ ಕಾಂಚನ್ ಮತ್ತು ದಿನೇಶ್ ಶೆಟ್ಟಿಯನ್ನು ನ.7ರ ರಾತ್ರಿ ಕಾರ್ಕಳದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಪ್ರಭಾರ ಪಿಎಸ್ಐ ಮುಕ್ತಾಬಾಯಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಬಳಿಕ ಇಬ್ಬರನ್ನೂ ಪ್ರಕರಣದ ತನಿಖಾಧಿಕಾರಿ, ಉಡುಪಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮುಂದೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.





















































































