
ನವದೆಹಲಿ: ಕರ್ನಾಟಕದ 7 ಜಿಲ್ಲೆಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳ ಪ್ರಯೋಗಾಲಯ ಪರೀಕ್ಷೆಯ ವರದಿಯನ್ನು ಮುಂದಿಟ್ಟುಕೊಂಡು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತೈಲ ಕಂಪನಿಗಳು ಸರ್ಕಾರ ನಿಗದಿಪಡಿಸಿರುವ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಬೆರೆಸಿ ಪೆಟ್ರೋಲ್ ಪೂರೈಸುತ್ತಿವೆ ಎಂದು ದೂರಿದ್ದಾರೆ.
ಶನಿವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ 14 ಮಾದರಿಗಳಲ್ಲಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚು ಎಥನಾಲ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರದ ಎಥನಾಲ್ ಮಿಶ್ರಣ ಯೋಜನೆಯನ್ನು ಟೀಕಿಸಿರುವ ಅವರು, “E20 ಈಗ 420 ಆಗಿದೆ. ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕದಿಯಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಹಂಚಿಕೊಂಡ ವರದಿಯ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮಾದರಿಯಲ್ಲಿ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮಾದರಿಯಲ್ಲಿ ಶೇ.30.5ರಷ್ಟು ಎಥನಾಲ್ ಪತ್ತೆಯಾಗಿದೆ. ಭಾರತ್ ಪೆಟ್ರೋಲಿಯಂ (BPCL), ನಯಾರಾ ಎನರ್ಜಿ ಮತ್ತು ಶೆಲ್ ಕಂಪನಿಗಳ ಮಾದರಿಗಳನ್ನೂ ಪರೀಕ್ಷಿಸಲಾಗಿದೆ. ಕಂಪನಿಗಳ ಸ್ವಂತ ಪ್ರಯೋಗಾಲಯಗಳು ಎಥನಾಲ್ ಪ್ರಮಾಣದ ಬಗ್ಗೆ ನಿಖರ ಮಾಹಿತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ವಾಹನಗಳ ಟ್ಯಾಂಕ್ಗೆ ನಿಜವಾಗಿ ಎಷ್ಟು ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್ ತುಂಬಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದು ನಿಗದಿತ ಮಿತಿಗಿಂತ ಹೆಚ್ಚು ಎಥನಾಲ್ ಬೆರೆಸುವ ಕಂಪನಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ಬಹಿರಂಗ ಸಂವಾದದ ಸವಾಲು ಇನ್ನೂ ಜೀವಂತವಾಗಿದ್ದು, ಸರ್ಕಾರದ ನೀತಿಗಳಿಂದ ನಿಜವಾದ ಲಾಭ ಪಡೆಯುತ್ತಿರುವವರು ಯಾರು ಎಂಬುದರ ಬಗ್ಗೆಯೂ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.

















































