ಸಾಹಿತ್ಯದ ಓದು ಸದಾ ಜೀವಂತಿಕೆಯನ್ನು ನೀಡುತ್ತದೆ: ಮಿತ್ರಪ್ರಭಾ ಹೆಗ್ಡೆ.

ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವು ಜರಗಿತು.ಉದ್ಘಾಟನೆಯನ್ನು ನೆರವೇರಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಸಾಹಿತ್ಯದ ಆಸಕ್ತಿ ಎಲ್ಲ ವಿದ್ಯಾರ್ಥಿಗಳಲ್ಲೂ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಮಿತ್ರಪ್ರಭಾ ಹೆಗ್ಡೆ ಮಾತನಾಡಿ, ಬದುಕಿಗೆ ಒಂದಿಷ್ಟು ಉಲ್ಲಾಸ ಮತ್ತು ಆಕರ್ಷಣೆ ನೀಡುವಂಥದ್ದು ಸಾಹಿತ್ಯ. ಬರುವ ಕಷ್ಟಗಳನ್ನು ಎದುರಿಸಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು.ಜೀವನದಲ್ಲಿ ಏನೂ ಇಲ್ಲ ಅಂತ ಅನಿಸಿದಾಗ ಸಾಹಿತ್ಯದ ಓದು ಜೀವಂತಿಕೆಯನ್ನು ಕೊಡುತ್ತದೆ..ಅಹ್ಲಾದಕರವಾದ ಬದುಕು ಮತ್ತು ಆಂತರಿಕವಾದ ನೆಮ್ಮದಿಗಾಗಿ ಸಾಹಿತ್ಯವನ್ನು ಅಗತ್ಯವಾಗಿ ಓದಬೇಕಿದೆ.
ವಿದ್ಯಾರ್ಥಿಗಳಲ್ಲಿ ವೇದಿಕೆಯನ್ನು ಬಳಸಿಕೊಳ್ಳುವುದು ಕೆಲವೇ ಕೆಲವರು.ಕೊಟ್ಟ ಕೆಲಸವನ್ನು ಮಾಡಲು ಎಲ್ಲ ವಿದ್ಯಾರ್ಥಿಗಳೂ ಪ್ರಯತ್ನ ಪಡಬೇಕು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಂಡು ಕಠಿಣ ಶ್ರಮವಹಿಸಬೇಕು. ಸೋಲಿಗೆ ಹೆದರಿ ಹಿಂಜರಿಯದೆ ಬದುಕನ್ನೆದುರಿಸಬೇಕು. ಜಾತಿ, ಧರ್ಮಗಳಿಂದ ಹೃದಯಗಳಿಗೆ ಗೋಡೆ ಕಟ್ಟದೆ, ವಿಶ್ವಾಸದ ಸೇತುವೆಗಳನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಐಕ್ಯೂಎಸಿ ಸಂಯೋಜಕರಾದ ಲಕ್ಷ್ಮೀ ನಾರಾಯಣ ಕೆ. ಎಸ್. ಇವರು, ಇಡೀ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಘದ ಒಲವಿರುವವರು ಅನೇಕರಿರುತ್ತಾರೆ. ಅವರ ಓದು ಅವರನ್ನು ಸಾಹಿತ್ಯದೆಡೆಗೆ ಪ್ರೇರೇಪಿಸುವಂತೆ ಮಾಡುತ್ತದೆ. ಸಾಹಿತ್ಯ ಸಂಘವು ಅನೇಕ ಹಿರಿಯರು ಉಪನ್ಯಾಸಗಳನ್ನು ನೀಡಿದ ಚಿಂತನಾತ್ಮಕ ವೇದಿಕೆಯಾಗಿದೆ. ಕನಿಷ್ಠ ಬರೆಯುವ ಪ್ರಯತ್ನವನ್ನು ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾದರೆ ಸಾಹಿತ್ಯ ಸಂಘದ ಕೆಲಸ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.
ವೇದಿಕೆಯಲ್ಲಿ ಸಾಹಿತ್ಯ ಸಂಘದ ಪ್ರತಿನಿಧಿ ಪವನ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ವನಿತಾ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ಕು.ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಂಘದ ಪ್ರತಿನಿಧಿ ಕು. ದಿಶಾ ವಂದಿಸಿದರು.


















