
ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಏರಿಕೆಯಾಗಿದ್ದ ಸಕ್ಕರೆ ಬೆಲೆಯಲ್ಲಿ ಇದೀಗ ಇಳಿಕೆ ಕಂಡುಬಂದಿದೆ. ಕೇಂದ್ರ ಸರ್ಕಾರ ಆಮದಿಗೆ ಅವಕಾಶ ನೀಡುವುದು, ದಾಸ್ತಾನು ನಿಯಂತ್ರಿಸುವುದು ಹಾಗೂ ಬೆಲೆ ಊಹಾಪೋಹ ತಡೆಯಲು ಕೈಗೊಂಡ ಕ್ರಮಗಳ ಪರಿಣಾಮ ಎಕ್ಸ್-ಮಿಲ್ ದರ ಕೆಜಿಗೆ ₹ 55ಕ್ಕೆ ಇಳಿದಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಕಳೆದ ವಾರ ಸಕ್ಕರೆಯ ಎಕ್ಸ್-ಮಿಲ್ ಬೆಲೆ ಕೆಜಿಗೆ ₹ 67ರ ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು. ಬಳಿಕ ಸರ್ಕಾರದ ಕ್ರಮಗಳಿಂದ ಸುಮಾರು ಶೇ.18ರಷ್ಟು ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ ಎಂದು ಚೋಪ್ರಾ ಹೇಳಿದ್ದಾರೆ.
2025-26 ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಸುಮಾರು 306 ಲಕ್ಷ ಟನ್‌ಗಳಿಗೆ ಇಳಿಯುವ ನಿರೀಕ್ಷೆಯಿದ್ದರೂ ದೇಶೀಯ ವಾರ್ಷಿಕ ಬೇಡಿಕೆ 280-285 ಲಕ್ಷ ಟನ್‌ಗಳಷ್ಟಿದ್ದು, ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ ದಾಸ್ತಾನು ಇದೆ. ಹೀಗಾಗಿ ಇತ್ತೀಚಿನ ಬೆಲೆ ಏರಿಕೆ ಕೇವಲ ಪೂರೈಕೆ ಕೊರತೆಯಿಂದ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅನುಮತಿ ನೀಡಿದೆ. ಜೊತೆಗೆ ಬೃಹತ್ ಗ್ರಾಹಕರಿಗೆ ದಾಸ್ತಾನು ಮಿತಿ ವಿಧಿಸಿ, ಅಕ್ರಮ ಸಂಗ್ರಹಣೆ ಹಾಗೂ ಕೃತಕ ಬೆಲೆ ಏರಿಕೆ ತಡೆಯಲು ರಾಜ್ಯಗಳಿಗೆ ತಪಾಸಣೆ ಹೆಚ್ಚಿಸುವಂತೆ ಸೂಚಿಸಿದೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ನಾಯಕ್ ನವರೆ ಪ್ರಕಾರ, ದೇಶದ ಯಾವುದೇ ರಾಜ್ಯದಲ್ಲಿ ಪ್ರಸ್ತುತ ಎಕ್ಸ್-ಮಿಲ್ ಬೆಲೆ ಕೆಜಿಗೆ ₹ 55ಕ್ಕಿಂತ ಹೆಚ್ಚಿಲ್ಲ. ಅಕ್ರಮ ದಾಸ್ತಾನು ಮತ್ತು ಹೆಚ್ಚಿನ ದರದ ಮಾರಾಟ ತಡೆಯಲು ದೇಶಾದ್ಯಂತ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ.
ಎಕ್ಸ್-ಮಿಲ್ ಹಾಗೂ ಸಗಟು ಬೆಲೆ ನಡುವೆ ಸಾಮಾನ್ಯವಾಗಿ ಕೆಜಿಗೆ ₹ 2-3 ಮತ್ತು ಚಿಲ್ಲರೆ ಬೆಲೆಯಲ್ಲಿ ₹ 7-8ರಷ್ಟು ವ್ಯತ್ಯಾಸವಿರುತ್ತದೆ. ಹೀಗಾಗಿ ಗಿರಣಿ ದರ ಇಳಿಕೆಯ ಪರಿಣಾಮ ಮುಂದಿನ ದಿನಗಳಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಆದರೆ ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಳಿಕೆಯ ಪರಿಣಾಮ ಸಂಪೂರ್ಣವಾಗಿ ಗೋಚರಿಸಿಲ್ಲ. ಆಗಸ್ಟ್ 24ರ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ ₹ 63.05 ಹಾಗೂ ಸರಾಸರಿ ಸಗಟು ಬೆಲೆ ₹ 58.29ರಷ್ಟಿದೆ.





















































































