
ಹೊಸದಿಲ್ಲಿ: ಕಸ್ತೂರಿ ರಂಗನ್ ವರದಿ ಆಧಾರಿತ ನಿರ್ಧಾರಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರಲ್ಲಿ ಉಂಟಾಗಿರುವ ಆತಂಕ, ಭಯ ಹಾಗೂ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.
ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶ್ರೀಗಳು ಈ ಕುರಿತು ಲಿಖಿತ ಪ್ರಸ್ತಾವನೆಯನ್ನು ಸಲ್ಲಿಸಿದರು. ಪಶ್ಚಿಮ ಘಟ್ಟದ ಜನರ ಸಮಸ್ಯೆಗಳು ಹಾಗೂ ಅವರ ಜೀವನೋಪಾಯದ ಕುರಿತಾದ ಆತಂಕಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಅಗತ್ಯವನ್ನು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಶ್ರೀಗಳ ಸಲಹೆಯನ್ನು ಸ್ವೀಕರಿಸಿದ ಅಮಿತ್ ಶಾ, ಈ ವಿಚಾರವನ್ನು ಖಂಡಿತವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.






























































































































