
ನವದೆಹಲಿ: ಸಂಸದರು ಮತ್ತು ಶಾಸಕರು ರಾಜಕೀಯ ಪಕ್ಷಗಳನ್ನು ತೊರೆಯುವುದಕ್ಕೆ ನಿರ್ಬಂಧ ವಿಧಿಸಬೇಕು ಎಂಬ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರ ನಿಲುವಿಗೆ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬೆಂಬಲ ವ್ಯಕ್ತಪಡಿಸಿದೆ. ಇದು ಇಂದಿನ ಅಗತ್ಯವಾಗಿದೆ ಎಂದು ಸಿಜೆಪಿ ರಾಷ್ಟ್ರೀಯ ಸಂಚಾಲಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ. ಸಹ-ಸಂಚಾಲಕ ಸೌರವ್ ದಾಸ್ ಕೂಡ ಸಿಬಲ್ ಅವರ ಅಭಿಪ್ರಾಯವನ್ನು ಸಮರ್ಥಿಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ನಡೆದ ‘ಕುದುರೆ ವ್ಯಾಪಾರ ಮತ್ತು ಪ್ರಜಾಪ್ರಭುತ್ವ’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಬಲ್, ಸಾಮೂಹಿಕ ಪಕ್ಷಾಂತರಕ್ಕೆ ವಿಲೀನದ ಹೆಸರಿನಲ್ಲಿ ಅವಕಾಶ ಸಿಗದಂತೆ ಸಂವಿಧಾನದ ಹತ್ತನೇ ವೇಳಾಪಟ್ಟಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದ್ದರು.
ಇದೇ ವಿಚಾರವಾಗಿ ಸಿಜೆಪಿ ತನ್ನ ಹೊಸ ಬೇಡಿಕೆಗಳ ಪಟ್ಟಿಯ ಐದನೇ ಅಂಶದಲ್ಲಿ, ಪಕ್ಷಾಂತರಿಗಳಿಗೆ 20 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಹಾಗೂ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದೆ.
ರಾಜ್ಯ ಸರ್ಕಾರಗಳನ್ನು ಉರುಳಿಸಲು ನಡೆಯುವ ಪಕ್ಷಾಂತರ ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ದೇಶಕ್ಕೆ ಮಾಡುವ ದ್ರೋಹ ಎಂದು ಸೌರವ್ ದಾಸ್ ಆರೋಪಿಸಿದ್ದಾರೆ. ಪಕ್ಷಾಂತರಿಗಳಿಗೆ ಮತ್ತೆ ಅಧಿಕಾರ ಸಿಗದಂತೆ ತಡೆಯುವುದು ಈಗ ಅತ್ಯಂತ ಅಗತ್ಯವಾಗಿದೆ ಎಂದು ಅಭಿಜೀತ್ ದೀಪ್ಕೆ ಹೇಳಿದ್ದಾರೆ.
ರಾಜಕೀಯ ಪಕ್ಷಗಳನ್ನು ಒಡೆಯಲು ಸಂಸದರಿಗೆ ₹ 50-100 ಕೋಟಿ ಲಂಚ ನೀಡಿ ಸರ್ಕಾರಗಳನ್ನು ಬೀಳಿಸುವುದು ದೇಶಕ್ಕೆ ವಂಚನೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು. ಹಾಲಿ ಪಕ್ಷಾಂತರ ವಿರೋಧಿ ಕಾನೂನು ಹಳೆಯದಾಗಿದ್ದು, ಆಡಳಿತ ಪಕ್ಷಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಯುವಕರು ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದ್ದಾರೆ ಎಂದು ದೀಪ್ಕೆ ಹೇಳಿದ್ದಾರೆ.





























































































































