57 ಮೆಟ್ರೋ, ರೈಲು ಸಂಚಾರಕ್ಕೆ ನಿರ್ಬಂಧ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ವಿರೋಧಿಸಿ ಅಕ್ಟೋಬರ್ 10ರಂದು ಕಾಕ್ರಾಚ್ ಜನತಾ ಪಾರ್ಟಿ (CJP) ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನವದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಆಯ್ದ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
24 ಗಂಟೆ ಇಂಟರ್ನೆಟ್ ಸೇವೆ ಬಂದ್:
ಜಂತರ್ ಮಂತರ್ ಸಮೀಪದ ಜನಪಥ್ ಮತ್ತು ಕರ್ತವ್ಯ ಪಥ್ ಕ್ರಾಸಿಂಗ್ನಿಂದ 4 ಕಿ.ಮೀ. ವ್ಯಾಪ್ತಿಯಲ್ಲಿ ಅಕ್ಟೋಬರ್ 9ರ ರಾತ್ರಿ 10ರಿಂದ ಅಕ್ಟೋಬರ್ 10ರ ರಾತ್ರಿ 10ರವರೆಗೆ 4G ಮತ್ತು 5G ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ದೆಹಲಿಯ ಉಳಿದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಎಂದಿನಂತೆ ಮುಂದುವರಿಯಲಿದೆ.
20 ವಲಯಗಳಾಗಿ ನವದೆಹಲಿ ಜಿಲ್ಲೆ ವಿಭಜನೆ:
ಪ್ರತಿಭಟನಾಕಾರರು ಜಂತರ್ ಮಂತರ್ ಅಥವಾ ಸಂಸತ್ ಭವನದತ್ತ ತೆರಳುವುದನ್ನು ತಡೆಯಲು ನವದೆಹಲಿ ಜಿಲ್ಲೆಯನ್ನು 20 ಭದ್ರತಾ ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಲಯಕ್ಕೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ದೆಹಲಿ ಪೊಲೀಸರೊಂದಿಗೆ ಬಿಎಸ್ಎಫ್ ಸೇರಿದಂತೆ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೆಹಲಿ-ನೋಯ್ಡಾ ಗಡಿಯಲ್ಲೂ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ.
57 ಮೆಟ್ರೋ ನಿಲ್ದಾಣಗಳ ಪ್ರವೇಶ ನಿರ್ಬಂಧ
ಭದ್ರತಾ ಕಾರಣಗಳಿಂದ ಶುಕ್ರವಾರ ರಾತ್ರಿ 9ರಿಂದ ದೆಹಲಿಯ 57 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಅಕ್ಟೋಬರ್ 10ರಂದು ಬೆಳಿಗ್ಗೆ 4ರಿಂದ ಮಧ್ಯಾಹ್ನ 2ರವರೆಗೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸುವ ಕೆಲವು ಪ್ರಮುಖ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಅಲ್ಲದೆ, ಅಕ್ಟೋಬರ್ 9 ಮತ್ತು 10ರಂದು ದೆಹಲಿಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಪ್ರತಿಭಟನೆಗೆ ಕಾರಣವೇನು?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ CJP, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಈ ಬೇಡಿಕೆ ಮುಂದಿಟ್ಟುಕೊಂಡು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.






















