
ಬೈಲೂರು, ಆಗಸ್ಟ್ 15, 2026: ನಚಿಕೇತ ವಿದ್ಯಾಲಯ, ಬೈಲೂರಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ, ಸಂಭ್ರಮ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ನಂತರ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ನಾಯಕ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಸಂಕೇತ್ ಕುಮಾರ್, ಗಿರೀಶ್ ತಂತ್ರಿ, ಮಂಜುನಾಥ್, ವಿನೋದ್ ಶೆಣೈ ಹಾಗೂ ಮಹಾಬಲ ಆಚಾರ್ಯ, ಮಾತೃ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಪ್ರಮೋದ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಭಾರತ ಮಾತೆಯ ಭಾವಚಿತ್ರಕ್ಕೆ ದೀಪ ಬೆಳಗಿ, ಆರತಿ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಲಾಯಿತು. ಎರಡನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶೈವಿ ಕುಂದರ್ ಅವರು ಭಾರತದ ಕುರಿತು ಭಾಷಣ ಮಾಡಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆಗಳ ಗಾಯನ ನಡೆಯಿತು.
ವಿದ್ಯಾಲಯದ ಸಹಶಿಕ್ಷಕಿ ಶ್ರೀಮತಿ ಸ್ವರಾಜ್ಯಲಕ್ಷ್ಮಿ ಅಲೆವೂರು ಅವರು ಮಾತನಾಡಿ, “ಸುಭಾಷ್ ಚಂದ್ರ ಬೋಸ್ ಅವರಂತಹ ಮಹನೀಯರ ತ್ಯಾಗ ಮತ್ತು ಹೋರಾಟದಿಂದ ಸ್ವಾತಂತ್ರ್ಯದ ಮಹತ್ವವನ್ನು ಅರಿಯಬೇಕು. ಸ್ವಾತಂತ್ರ್ಯ ಯಾರೂ ಕೊಟ್ಟದ್ದಲ್ಲ, ನಾವೇ ಪಡೆದುಕೊಂಡದ್ದು. ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ನಮ್ಮ ಸೈನಿಕರ ಬದ್ಧತೆ ಮತ್ತು ತ್ಯಾಗವನ್ನು ಗೌರವಿಸಬೇಕು. ಹಲವರ ತ್ಯಾಗ, ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ರವೀಂದ್ರ ನಾಯಕ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೀವನದಲ್ಲಿ ಸಂಸ್ಕಾರದ ಮಹತ್ವವನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಸ್ಕಾರ, ದೇಶಭಕ್ತಿ ಮತ್ತು ಉತ್ತಮ ಮೌಲ್ಯಗಳು ವಹಿಸಿದ ಪಾತ್ರವನ್ನು ಅವರು ವಿವರಿಸಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಸಹಶಿಕ್ಷಕ ಶ್ರೀ ವಿರಾಜ್ ಅವರು ನೆರವೇರಿಸಿದರು.
ತದನಂತರ ವಿದ್ಯಾರ್ಥಿಗಳಿಂದ ಮನರಂಜನೆಯೊಂದಿಗೆ ರಾಷ್ಟ್ರೀಯ ಭಾವೈಕ್ಯತೆಯ ಸಂದೇಶ ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮೋಹಕವಾಗಿ ಮೂಡಿಬಂದವು. ವಿವಿಧ ಚದ್ಮವೇಷಗಳ ಮೂಲಕ ವಿದ್ಯಾರ್ಥಿಗಳು ದೇಶದ ಮಹನೀಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಜೀವಂತಗೊಳಿಸಿ, ನೆರೆದಿದ್ದವರ ಮನಸೂರೆಗೊಂಡರು.
ವಿದ್ಯಾರ್ಥಿಗಳೇ ರಚಿಸಿದ ಹೂಗುಚ್ಛಗಳು, ನಾಮಫಲಕಗಳು ಹಾಗೂ ಸಭಾವೇದಿಕೆಯ ಅಲಂಕಾರ -ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ಕಾರ್ಯಕ್ರಮದ ನಿರೂಪಣೆಯನ್ನು 7ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಸನ್ನಿಧಿ ಮತ್ತು ಕುಮಾರಿ ಸೃಷ್ಟಿ ಅಚ್ಚುಕಟ್ಟಾಗಿ ನೆರವೇರಿಸಿದರು. 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ವೈಷ್ಣವಿ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಸಹಶಿಕ್ಷಕಿ ಶ್ರೀಮತಿ ಪ್ರತಿಮಾ ಅವರು ನೆರವೇರಿಸಿದರು.
ವಿದ್ಯಾಲಯದ ಪೋಷಕರಲ್ಲಿ ಒಬ್ಬರಾದ ಶ್ರೀ ಸದಾನಂದ ಸಾಲಿಯನ್ ಅವರು ಮಕ್ಕಳಿಗೆ ತಿಂಡಿ ವಿತರಿಸಿದರು. ಕೊನೆಯಲ್ಲಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸುಸಂಪನ್ನವಾಗಿ ಮುಕ್ತಾಯಗೊಂಡಿತು.
ದೇಶಭಕ್ತಿ, ಸಂಸ್ಕಾರ ಮತ್ತು ಸಾಂಸ್ಕೃತಿಕ ವೈಭವವನ್ನು ಒಳಗೊಂಡ ಈ ಸ್ವಾತಂತ್ರ್ಯ ದಿನಾಚರಣೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.













































































































