ದಕ್ಷಿಣ ಭಾರತದಲ್ಲಿ ಪ್ರಕೃತಿ ವಿಕೋಪದ ಎಚ್ಚರಿಕೆ..!
ಮಳೆ-ಬೆಳೆ ಬಗ್ಗೆ ಕೋಡಿಶ್ರೀ ಭವಿಷ್ಯ

ಹಾಸನ: ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಹಿನ್ನೆಲೆಯಲ್ಲಿ ರೈತರು ಆತಂಕದಲ್ಲಿರುವ ನಡುವೆಯೇ, ಈ ವರ್ಷದ ಮಳೆ-ಬೆಳೆ ಕುರಿತು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಈ ವರ್ಷ ಮುಂಗಾರು ಮಳೆ ವಿರಳವಾಗುತ್ತದೆ. ಜನ ಜಂಗುಳಿಯಾಗುತ್ತದೆ. ಅನ್ನ, ಆಹಾರ, ನೀರಿಗೆ ಕೊರತೆಯಾಗುತ್ತದೆ. ಸಾವು-ನೋವುಗಳು ಹೆಚ್ಚಾಗುತ್ತದೆ. ವಿಪರೀತ ಪ್ರವಾಹ ಬರುತ್ತದೆ ಎಂದು ಹೇಳಿದ್ದೆ. ಈಗ ಅದು ನಡೆಯುತ್ತಿದೆ ಎಂದು ಹೇಳಿದ ಸ್ವಾಮೀಜಿ ಹಿಂಗಾರು ಮಳೆಯಿಂದ ಕೆರೆ-ಕಟ್ಟೆಗಳು ತುಂಬಲಿದ್ದು, ಶೇ.90ರಷ್ಟು ಜನರಿಗೆ ಪರಿಹಾರ ಸಿಗುವ ಲಕ್ಷಣವಿದೆ ಎಂದರು.
ಉತ್ತರ ಭಾರತ ಹಾಗೂ ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ಮಾದರಿಯಲ್ಲೇ ದಕ್ಷಿಣ ಭಾರತದಲ್ಲೂ ಸಾವು-ನೋವು, ಪ್ರವಾಹ ಹಾಗೂ ಊರುಗಳು ಕೊಚ್ಚಿಹೋಗುವಂತಹ ಘಟನೆಗಳ ಸಾಧ್ಯತೆ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಅತಿಯಾಗಿ ಭೂಮಿಯನ್ನು ಕೊರೆದಿರುವುದು ಹಾಗೂ ಬೋರ್‌ವೆಲ್‌ಗಳ ಹೆಚ್ಚಳದಿಂದ ಪ್ರಕೃತಿಯ ಸಮತೋಲನಕ್ಕೆ ಧಕ್ಕೆಯಾಗಿದೆ. ಇದರಿಂದ ನೀರಿನ ಸಮಸ್ಯೆ, ಪ್ರವಾಹ ಮತ್ತು ಭೂಕಂಪನದಂತಹ ಘಟನೆಗಳು ಹೆಚ್ಚಾಗುತ್ತಿವೆ ಎಂದು ಸ್ವಾಮೀಜಿ ಹೇಳಿದರು.
ಮುಂದಿನ ಕಷ್ಟಗಳು ದೂರವಾಗಲು ಭಗವಂತನಲ್ಲಿ ಪ್ರಾರ್ಥಿಸಬೇಕು. ದಕ್ಷಿಣ ಭಾರತದಲ್ಲಿ ಸಮುದ್ರ ನುಗ್ಗುವಿಕೆ ಹಾಗೂ ಪ್ರವಾಹದಂತಹ ಅಪಾಯಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು ಎಂದರು.
ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆಗಿರುವುದು ಶುಭಕರ. ಯುವಕರು ಮತ್ತು ಅನುಭವಿಗಳಿಗೆ ಅಧಿಕಾರ ದೊರೆತಿದ್ದು, ಅವರಿಗೆ ಪ್ರೋತ್ಸಾಹ ಹಾಗೂ ಆಶೀರ್ವಾದ ನೀಡಬೇಕು ಎಂದು ಕೋಡಿಶ್ರೀ ಹೇಳಿದರು.




































