ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಮಂಗಳೂರು: ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಟೇಕಾಫ್ ಆಗುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪೈಲಟ್ ತಕ್ಷಣವೇ ಸಮಯಪ್ರಜ್ಞೆ ಮೆರೆದು ವಿಮಾನವನ್ನು ರನ್ವೇಯಲ್ಲೇ ನಿಲ್ಲಿಸಿದ್ದು, ವಿಮಾನದಲ್ಲಿದ್ದ 236 ಮಂದಿಯ ಜೀವ ಉಳಿದಿದೆ.
ನಿನ್ನೆ ಸಂಜೆ ಸುಮಾರು 6 ಗಂಟೆಗೆ ವಿಮಾನ ಟೇಕಾಫ್ ಆಗಲು ಸಿದ್ಧವಾಗಿದ್ದಾಗ ಪೈಲಟ್ ಎಂಜಿನ್ನಲ್ಲಿನ ದೋಷವನ್ನು ಗಮನಿಸಿದ್ದಾರೆ. ಕೂಡಲೇ ತುರ್ತು ಬ್ರೇಕ್ ಹಾಕಿದರೂ ವಿಮಾನ ವೇಗದಲ್ಲಿ ಮುಂದಕ್ಕೆ ಚಲಿಸಿ, ಕೊನೆಗೆ ರನ್ವೇ ಅಂತ್ಯದಲ್ಲಿ ನಿಂತಿದೆ. ಮಂಗಳೂರಿನ ಟೇಬಲ್ಟಾಪ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಈ ಘಟನೆಯಿಂದ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನದಲ್ಲಿ 229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಇದ್ದರು. ಟೇಕಾಫ್ಗೆ ಅನುಮತಿ ದೊರೆತು ವಿಮಾನ ವೇಗವಾಗಿ ಚಲಿಸುತ್ತಿದ್ದಾಗ ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೈಲಟ್ ವಿಮಾನವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಮಾನ ರನ್ವೇ ದಾಟಿ ಮುಂದಕ್ಕೆ ಸಾಗಿದ್ದರೆ ಭಾರೀ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು. ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಿಸಿ ಬಳಿಕ ಹಿಂದಕ್ಕೆ ಕರೆತಂದಿದ್ದಾರೆ. ನಂತರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ವ್ಯವಸ್ಥೆ ಮಾಡಲಾಗಿದೆ.
ಘಟನೆಯ ಬಳಿಕ ಇಂಡಿಗೋ ಸಂಸ್ಥೆಯು ಪ್ರಯಾಣಿಕರಿಗಾಗಿ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ.






















































































