ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದ ಪೊಲೀಸರು

ಮಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಾಗಿ ಮಗಳು ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಅವರ ಮೃತದೇಹವನ್ನು ದಫನ ಮಾಡಿದ ಎರಡು ತಿಂಗಳ ಬಳಿಕ ಹೊರತೆಗೆದು ಪೊಲೀಸರು ಎಫ್ಎಸ್ಎಲ್ ಪರೀಕ್ಷೆಗೆ ಮುಂದಾಗಿದ್ದಾರೆ.
ಆಲ್ಬರ್ಟ್ ಅವರು ಜುಲೈ 19ರಂದು ಮೃತಪಟ್ಟಿದ್ದರು. ಆದರೆ, ಅವರ ಮಗಳು ಮಾಯಾ ರೇಗೋ ಸಾವಿನ ವಿಚಾರವನ್ನು ನೆರೆಹೊರೆಯವರು ಹಾಗೂ ಸಂಬಂಧಿಕರಿಗೆ ತಿಳಿಸದೆ ದೇರೆಬೈಲ್ ಚರ್ಚ್ನ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಳು ಎನ್ನಲಾಗಿದೆ. ಈ ನಡೆ ಮೃತರ ಆಪ್ತ ಸ್ನೇಹಿತರಲ್ಲಿ ಅನುಮಾನ ಮೂಡಿಸಿತ್ತು.
ಆಲ್ಬರ್ಟ್ ಅವರಿಗೆ ನಾಲ್ವರು ಮಕ್ಕಳಿದ್ದು, ಇಬ್ಬರು ದುಬೈನಲ್ಲಿ ನೆಲೆಸಿದ್ದಾರೆ. ಸುಮಾರು 70ರಿಂದ 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದ ಅವರು, ಸಾವಿಗೂ ಮುನ್ನ ಮಗಳ ಹೆಸರಿಗೆ ಬಲವಂತವಾಗಿ ವಿಲ್ ಬರೆಸಿಕೊಂಡಿದ್ದರು ಎಂದು ಆಪ್ತ ಸ್ನೇಹಿತ ಅಜೋಯ್ ಆರೋಪಿಸಿದ್ದಾರೆ. ಬಳಿಕ ಹತ್ಯೆ ನಡೆಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಮೃತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸ್ನೇಹಿತರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಹಸೀಲ್ದಾರ್ ಹಾಗೂ ಎಫ್ಎಸ್ಎಲ್ ತಜ್ಞರ ಸಮ್ಮುಖದಲ್ಲಿ ಸಮಾಧಿಯಿಂದ ಶವವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿ ಬಳಿಕ ಸಾವಿನ ನಿಜವಾದ ಕಾರಣ ತಿಳಿಯಬೇಕಿದೆ.
ಇದೇ ವೇಳೆ, ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪವನ್ನೂ ಅಜೋಯ್ ಮಾಡಿದ್ದಾರೆ. ಆಲ್ಬರ್ಟ್ ಅವರನ್ನು ಸಮೀಪದ ಎ.ಜೆ. ಆಸ್ಪತ್ರೆಗೆ ಕರೆದೊಯ್ಯುವ ಬದಲು ಬೋಂದೇಲ್ನ ಆಸ್ಪತ್ರೆಗೆ ಕರೆದೊಯ್ದು ಮರಣ ಪ್ರಮಾಣಪತ್ರ ಪಡೆಯಲಾಗಿತ್ತು ಎಂದು ಅವರು ಹೇಳಿದ್ದಾರೆ. ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






















