ಭಾಗ – 702
ಭರತೇಶ್ ಶೆಟ್ಟಿ, ಎಕ್ಕಾರು

ಬಂದಂತಹ ಮಹರ್ಷಿ ನಾರದರನ್ನು ಕಂಡು ಗೌರವಾದರಗಳಿಂದ ಸ್ವಾಗತಿಸಿ ಉಪಚರಿಸಿದ ಧರ್ಮರಾಯ, ಕುಶಲೋಪಚರಿ ವಿಚಾರಿಸುತ್ತಾ, “ಪೂಜ್ಯರೇ, ತಮ್ಮ ಕ್ಷೇಮ ಸಮಾಚಾರ ತಿಳಿಸಿ. ನೀವು ಇಚ್ಚಾಗಮನ ಶಕ್ತಿಯುಳ್ಳವರು. ಲೋಕ ಲೋಕಗಳ ಸಂಚಾರಗೈಯುತ್ತಿರುವವರು. ಎಲ್ಲಿಯಾದರು ಏನಾದರು ಸಮಸ್ಯೆ ಇದೆಯೆ? ಕಾರ್ಯ ಕಾರಣವಿಲ್ಲದೆ ಎಲ್ಲಿಗೂ ತಾವು ಹೋಗುವವರಲ್ಲ. ನಮ್ಮಿಂದ ಏನಾದರು ಉಪಕಾರ್ಯ ಆಗಬೇಕಾಗಿದೆಯೆ? ನೀವು ಆಜ್ಞೆ ಮಾಡಿದರೆ ನಿಮ್ಮ ಸೇವೆಗೆ ನಾನು ಸಿದ್ಧನಿದ್ದೇನೆ” ಎಂದನು.
ನಾರದರು ಧರ್ಮರಾಯನ ಪ್ರಶ್ನೆಗಳಿಗೆ ಪ್ರತಿಯಾಗಿ “ಅಯ್ಯಾ ಮಹಾರಾಜಾ! ನಾನು ಅನ್ಯ ಯಾವ ಉದ್ದೇಶದಿಂದಾಗಲಿ, ಕಾರ್ಯ ಕಾರಣದಿಂದಾಗಲಿ ಇಲ್ಲಿಗೆ ಬಂದವನಲ್ಲ. ಇಲ್ಲಿಗೆ ಬರುವ ಮೊದಲು ಸಂಚಾರ ಮಾಡುತ್ತಾ ಅನೇಕ ಪುಣ್ಯ ತೀರ್ಥ, ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಗಂಗಾತೀರದತ್ತ ಬಂದಿದ್ದೆನು. ಅಲ್ಲಿಯೆ ತಪೋವನ ಪ್ರದೇಶದಲ್ಲಿ ಸಂಚರಿಸುತ್ತಾ ಹೋಗುತ್ತಿರುವಾಗ……” ಎಂದು ಹೇಳುತ್ತಿರುವಂತೆಯೆ ಧರ್ಮರಾಯ ಮಧ್ಯೆ ಮಾತನಾಡಿ “ಸ್ವಾಮಿಗಳೇ! ನಮ್ಮ ಹಿರಿಯರಾದ ಧೃತರಾಷ್ಟ್ರ, ಮಾತೆಯರಾದ ಕುಂತಿ, ಗಾಂಧಾರಿಯರೂ ಅಲ್ಲಿಯೆ ತಪೋವನದಲ್ಲಿ ತಪೋ ನಿರತರಾಗಿದ್ದಾರೆ. ಅವರೇನಾದರು ನಿಮಗೆ ಕಾಣ ಸಿಕ್ಕರೇ? ಏನಾದರು ಹೇಳಿದರೇ? ಹಾಗಿದ್ದರೆ ಮೊದಲು ಆ ವಿಚಾರ ಹೇಳಿ ನಂತರ ನೀವು ಹೇಳಲು ಹೊರಟಿರುವ ಕಥೆ ಹೇಳುವಿರಂತೆ” ಎಂದು ಅವಸರಿಸಿ ತಡೆದು ನುಡಿದನು.
“ಧರ್ಮರಾಯಾ! ಎಲ್ಲವನ್ನೂ ಹೇಳುತ್ತೇನೆ. ಸಾವಧಾನದಿಂದ ಕೇಳಿಸಿಕೋ… ಆ ತಪೋವನದಲ್ಲಿ ನಾನು ಏನೆಲ್ಲ ನೋಡಿದೆನೋ, ಕೇಳಿದೆನೋ…ಆ ಎಲ್ಲವನ್ನೂ ಯಥಾವತ್ತಾಗಿ ನಿನಗೆ ವಿವರಿಸಿ ಹೇಳುತ್ತೇನೆ. ನೀನು ಸ್ಥಿರ ಚಿತ್ತನಾಗಿ ಕೇಳಬೇಕು” ಎಂದರು. ಆಗ ಧರ್ಮರಾಯನು “ಹಾಗೆಯೇ ಆಗಲಿ ಪೂಜ್ಯರೇ” ಎಂದು ಕೈ ಮುಗಿದು ಶ್ರೋತ್ರಿಯಾದನು.
“ಯುಧಿಷ್ಠಿರಾ! ನೀವೆಲ್ಲರೂ ತಪೋವನಕ್ಕೆ ಹೋಗಿ ಬಂದಿರುವ ಸಂಗತಿ ನಾನು ಕೇಳಿ ತಿಳಿದುಕೊಂಡೆನು. ನೀವು ತಪೋವನಕ್ಕೆ ಹೋಗಿ ಮರಳಿ ಬಂದ ಬಳಿಕ ನಿನ್ನ ದೊಡ್ಡಪ್ಪ ಧೃತರಾಷ್ಟ್ರ, ಮಾತೆಯರಾದ ಗಾಂಧಾರಿ, ಕುಂತಿ ಮತ್ತು ಸಂಜಯರು ಯಾಜಕರ ಜೊತೆಯಾಗಿ ಅಗ್ನಿಯನ್ನು (ಅಗ್ನಿ ಹೋತ್ರ ಮಾಡಲು) ಹಿಡಿದುಕೊಂಡು ಹರಿದ್ವಾರದತ್ತ ಪ್ರಯಾಣ ಮಾಡಿದರಂತೆ. ಅಲ್ಲಿ ಧೃತರಾಷ್ಟ್ರ ತಪೋಧನನಾಗಿ ಕಠೋರವಾದ ತಪಸ್ಸನ್ನು ಆಚರಿಸ ತೊಡಗಿದನಂತೆ. ಬಾಯಿಯಲ್ಲಿ ಮರದ ಚೂರುಗಳನ್ನು ಹಿಡಿದುಕೊಂಡು ಕೇವಲ ಗಾಳಿಯನ್ನಷ್ಟೆ ಆಹಾರವಾಗಿ ಸೇವಿಸುತ್ತಾ ಮೌನಿಯಾಗಿ ತಪಸ್ಸು ಮಾಡತೊಡಗಿದ್ದನಂತೆ. ಆ ಗಂಗಾದ್ವಾರದಲ್ಲಿ ಹರಿಕ್ಷೇತ್ರದಲ್ಲಿದ್ದ ಋಷಿವರರೆಲ್ಲರೂ ಮಹಾ ತಪಸ್ವಿಯಾಗಿ ಆಚರಣೆ ನಿರತನಾಗಿದ್ದ ಧೃತರಾಷ್ಟ್ರನಿಗೆ ವಿಶೇಷ ಗೌರವವನ್ನು ನೀಡತೊಡಗಿದ್ದರಂತೆ. ತಪಸ್ಸು ಎಷ್ಟು ಉಗ್ರವಾಗಿತ್ತು ಎಂದರೆ ಧೃತರಾಷ್ಟ್ರನ ಶರೀರ ಕೇವಲ ಚರ್ಮ ಹೊದೆದ ಎಲುಬಿನ ಹಂದರವಷ್ಟೇ ಆಗಿ ವಾಯು ಸಂಚಾರ ಮಾತ್ರ ಇದ್ದ ಸ್ಥಿತಿಯಲ್ಲಿ ನಿರಂತರ ಆರು ತಿಂಗಳ ಕಾಲ ಕಳೆದನಂತೆ. ಮಹಾರಾಜ ಧೃತರಾಷ್ಟ್ರ ಈ ರೀತಿ ಇರುವಾಗ ಗಾಂಧಾರಿ ನೀರು ಮಾತ್ರ ಸೇವಿಸುತ್ತಾ ತಪಸ್ಸಿನಲ್ಲಿ ತೊಡಗಿದ್ದಳಂತೆ. ನಿಮ್ಮ ಜನ್ಮದಾತೆ ಕುಂತಿ ತಿಂಗಳಿಗೊಂದಾವರ್ತಿ ಆಹಾರ ಸೇವಿಸುತ್ತಾ ತಪಸ್ಸನ್ನಾಚರಿಸಲು ತೊಡಗಿದ್ದಳಂತೆ. ಸಂಜಯನು ಎರಡು ದಿನ ಉಪವಾಸವಿದ್ದು ಮರುದಿನ ರಾತ್ರಿ ಹೊತ್ತು ಊಟ ಮಾಡುತ್ತಾ ಇವರು ಮೂವರ ಸೇವೆ ಮಾಡುತ್ತಾ ತಾನು ಧ್ಯಾನ ನಿರತನಾಗಿರುತ್ತಿದ್ದನಂತೆ. ಧೃತರಾಷ್ಟ್ರನು ಜೊತೆಯಲ್ಲಿ ತಂದಿದ್ದ ಅಗ್ನಿಯಿಂದ ಯಾಜಕರು ಕಾಲ ಕಾಲಕ್ಕೆ ಸರಿಯಾಗಿ ಹೋಮಾದಿ ಕರ್ಮಗಳನ್ನು ಆಚರಿಸುತ್ತಿದ್ದರಂತೆ. ಹೀಗೆ ದಿನಗಳೆಯುತ್ತಿರಲು ತಪಸ್ಶ್ಯಕ್ತಿಯಿಂದ ಧೃತರಾಷ್ಟ್ರನು ಕೆಲವೊಮ್ಮೆ ಕಾಣಿಸುತ್ತಿದ್ದರೆ ಒಮ್ಮೊಮ್ಮೆ ಅದೃಶ್ಯನಾಗಿರುತ್ತಿದ್ದನಂತೆ.
ಹೀಗೆ ಕೆಲ ಸಮಯ ಸಂದು ಹೋದಾಗ ಮನೆ ಮಠ ಆಶ್ರಮಗಳನ್ನು ಹೊಂದಿರದ ಧೃತರಾಷ್ಟ್ರ ಅನಿಕೇತನನಾಗಿ ಅರಣ್ಯದಲ್ಲಿ ಎಲ್ಲೆಲ್ಲೋ ಸುತ್ತಾಡಲು ಆರಂಭಿಸಿದನಂತೆ. ಆ ಸಮಯ ಸಂಜಯನು ರಾಜನಿಗೂ, ಕುಂತಿ ಗಾಂಧಾರಿಗೂ ಸಹಕಾರಿಯಾಗಿ ಜೊತೆಯಾಗಿ ಅನುಸರಿಸಿ ಹೋಗುತ್ತಿದ್ದರಂತೆ. ಹೀಗೆಯೇ ಅರಣ್ಯ ಮಧ್ಯದಲ್ಲಿ ಸಾಗುತ್ತಾ ಇರುವಾಗ ಹರಿಯುತ್ತಿರುವ ಗಂಗಾನದಿ ಅವರಿಗೆ ಎದುರಾಗಿ ಕಾಣಿಸಿತು. ಧೃತರಾಷ್ಟ್ರಾದಿಗಳೆಲ್ಲರೂ ನದಿಗಿಳಿದು ಸ್ನಾನಾದಿ ಕರ್ಮಗಳನ್ನು ಪೂರೈಸಿದರಂತೆ. ನದಿಯಿಂದ ಮೇಲಕ್ಕೆ ಬಂದು ಅರಣ್ಯದೊಳಗೆ ಬರುತ್ತಿದ್ದಂತೆ ಒಮ್ಮೆಲೆ ಅತಿ ವೇಗದ ಭೀಕರ ಬಿರುಗಾಳಿ ಬೀಸಲು ಆರಂಭಿಸಿತಂತೆ……”
ಮುಂದುವರಿಯುವುದು….






















































































