
ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಹಾಗೂ ದ್ವೇಷಗಳು ಬಲೆಯಂತೆ ಹೆಣೆದುಕೊಂಡಿದ್ದು, ಅವು ಪ್ರೀತಿಯನ್ನು ವ್ಯಕ್ತಪಡಿಸಲು ಅಡ್ಡಿಯಾಗುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಗಿಂಗ್: ಎ ಜರ್ನಿ ಆಫ್ ಲವ್’ ಬಿಡುಗಡೆ ಸಮಾರಂಭದಲ್ಲಿ ತಮ್ಮ ತಂದೆ-ತಾಯಿಯ ನಡುವಿನ ಆತ್ಮೀಯ ಸಂಬಂಧದ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದರು. ಪ್ರತಿ ಊಟದ ಸಮಯದಲ್ಲೂ ತಂದೆ ಹಾಜರಿರುತ್ತಿದ್ದರು ಮತ್ತು ತಾಯಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ‘ಒಬ್ಬ ನಿಜವಾದ ಹಿಂದುವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರನ್ನು ಈ ಭಯ, ಕೋಪ ಮತ್ತು ದ್ವೇಷದ ಬಲೆಯಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗ ಅವರೂ ಜೀವನದಲ್ಲಿ ಪ್ರೀತಿ ಮತ್ತು ಆತ್ಮೀಯತೆಯ ಸೌಂದರ್ಯವನ್ನು ಅನುಭವಿಸಬಹುದು. ಸತ್ಯಂ ಶಿವಂ ಸುಂದರಂ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ, 12ನೇ ಶತಮಾನದ ದೇವಾಲಯವೊಂದರ ಶಿಲ್ಪದ ಚಿತ್ರವನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಪಾರ್ವತಿ ದೇವಿಯು ಶಿವನ ತೊಡೆಯ ಮೇಲೆ ಕುಳಿತಿರುವುದನ್ನು ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ರಾಹುಲ್ ಹೇಳಿಕೆಯ ವಿಡಿಯೋ ಹಂಚಿಕೊಂಡು, ‘ಕ್ಷಮಿಸಿ ಮೇಡಂ, ನಿಮ್ಮ ಜೀವನದ ಇಂತಹ ವಿಶೇಷ ದಿನದಂದೂ ಸಹ ಅವರು ನಿಮ್ಮನ್ನು ಮುಜುಗರಕ್ಕೀಡು ಮಾಡುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ದೇಶವು ಇದನ್ನು ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿದೆ. ಈಗಲಾದರೂ ನಿಮಗೆ ಇದು ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಈ ಉತ್ಪನ್ನವು (ರಾಹುಲ್) ಮರು-ಬಿಡುಗಡೆಗೆ (ಲಾಂಚ್ ಮತ್ತು ರೀ-ಲಾಂಚ್) ಮೀರಿದ್ದಾಗಿದೆ’ ಎಂದು ಟೀಕಿಸಿದ್ದರು.






















































































