ಭಾಗ – 700
ಭರತೇಶ ಶೆಟ್ಟಿ,ಎಕ್ಕಾರು

ಹೀಗೆ ಭಗವಾನ್ ವ್ಯಾಸರ ಕೃಪೆಯಿಂದ ಧೃತರಾಷ್ಟ್ರ, ಗಾಂಧಾರಿ, ಕುಂತಿ, ಸಂಜಯರ ಜೊತೆಯಲ್ಲಿ ಪಾಂಡವರು ಹಾಗು ಹಸ್ತಿನೆಯ ಪುರಜನರು ಯುದ್ಧದಲ್ಲಿ ಮಡಿದು ಹೋಗಿದ್ದ ಪತಿ, ಪುತ್ರ, ಬಂಧುಗಳೆಲ್ಲರನ್ನು ಕನಸಿನಂತೆ ನೋಡಿದ್ದಾರೆ. ಈಗ ಧೃತರಾಷ್ಟ್ರ ಮಹಾರಾಜನಾಗಿದ್ದವನು ತಪಸ್ಚರ್ಯೆಯಿಂದ ಋಷಿಯಾಗಿದ್ದಾನೆ. ವೈರಾಗ್ಯ ಭಾವವೊ, ಧೃಡ ಸಂಕಲ್ಪವೊ ಏನೆಂದು ಅರಿಯದು. ಆದರೆ ಶೋಕ ರಹಿತನಾಗಿ ಪುತ್ರವಿಯೋಗದ ದುಃಖದಿಂದ ಮುಕ್ತನಾಗಿದ್ದಾನೆ. ಅಲ್ಲಿಗೆ ಬಂದು ಸೇರಿದ್ದ ಋಷಿಗಡಣ ಒಬ್ಬೊಬ್ಬರಾಗಿ ಅನುಮತಿ ಪಡೆದು ಹೊರಟು ಹೋಗತೊಡಗಿದ್ದಾರೆ. ಮಹಾತ್ಮರಾದ ಪಾಂಡವರು ತಪೋವನ ಸೇರಿದ ಹಿರಿಯರ ಜೊತೆಯಾಗಿ ಗಂಗಾತೀರದಿಂದ ತಪೋವನದ ಆಶ್ರಮದತ್ತ ಮರಳಿ ಬಂದು ಪೂಜನೀಯ ವ್ಯಾಸರತ್ತ ನೋಡುತ್ತಿದ್ದಾರೆ. ಮುಂದೇನು? ಹೇಗೆ ಎಂಬ ಯಾವ ವಿಚಾರವೂ ಅರ್ಥವಾಗುತ್ತಿಲ್ಲ.
ಆಗ ವ್ಯಾಸರು “ಹೇ ಕುರುಪತಿ ಧೃತರಾಷ್ಟ್ರಾ! ನೀನು ಪುಣ್ಯಾತ್ಮನಾಗಿರುವೆ. ಧರ್ಮಿಷ್ಠರಾದ ಪಾಂಡವರ ಜೊತೆ ಬಹುವರ್ಷದ ಸುಖ ಜೀವನ ಸಾಗಿಸಿರುವೆ. ಬಹುವಿಧ ಧರ್ಮಕಾರ್ಯಗಳನ್ನು ಗೈದಿರುವೆ. ಈಗ ತಪೋವನ ಸೇರಿ ತಪವನ್ನೂ ಆಚರಿಸಿರುವೆ. ಮಹರ್ಷಿ ನಾರದರಿಂದ ದೇವಲೋಕದ ರಹಸ್ಯ ವಿಚಾರಗಳನ್ನು ತಿಳಿದಿರುವೆ. ನಿನ್ನ ಮಕ್ಕಳು ಹತರಾಗಿದ್ದರೂ ವೀರ ಸ್ವರ್ಗ ಸಾಧಿಸಿ ಅವರೆಲ್ಲರು ಸುಖಿಗಳಾಗಿದ್ದಾರೆ ಎಂಬ ಸತ್ಯವನ್ನು ತಿಳಿದಿರುವೆ. ನೀನು ಮಹಾರಾಜನಾಗಿದ್ದವನು. ಹಸ್ತಿನೆಯ ರಾಜ್ಯಭಾರ ನೋಡಿಕೊಳ್ಳಬೇಕಾದ ಧರ್ಮರಾಯ ಮತ್ತವನ ಸೋದರರು ಪತ್ನಿ ಸಮೇತರಾಗಿ, ಪ್ರಜಾ ಪರಿವಾರ ಸಹಿತ ತಪೋವನಕ್ಕೆ ಬಂದು ನಿಮ್ಮ ಸೇವಾ ನಿರತರಾಗಿದ್ದಾರೆ. ರಾಜ್ಯದಲ್ಲಿ ಶತ್ರುಬಾಧೆಯ ನಿವಾರಣೆ, ನ್ಯಾಯ ಪರಿಪಾಲನೆ, ಧರ್ಮ ಕಾರ್ಯಗಳ ಆಚರಣೆ ಮಾಡಬೇಕಾದ ಹೊಣೆಯುಳ್ಳ ಧರ್ಮರಾಯ ಇನ್ನು ಆತನ ಕ್ಷಾತ್ರ ಕರ್ತವ್ಯದತ್ತ ಗಮನ ಹರಿಸಲು ಅವಕಾಶ ಮಾಡಿಕೊಡಬೇಕು. ಹಾಗಾಗಿ ಆತನನ್ನು ಮರಳಿ ಹಸ್ತಿನೆಗೆ ಹೋಗಲು ಅನುಮತಿ ನೀಡಬೇಕು.” ಎಂದು ಸಲಹೆ ನೀಡಿದರು.
ಅಂತೆಯೆ ಧೃತರಾಷ್ಟ್ರ ಧರ್ಮರಾಯನನ್ನು ಬಳಿ ಕರೆದು “ಅಯ್ಯಾ ಅಜಾತಶತ್ರುವೆ! ನೀನು ಬಹುವಿಧದಿಂದ ನಮ್ಮ ಸೇವೆ ಮಾಡಿರುವೆ. ಆ ಭಾಗ್ಯ ಪಡೆದ ನಾವು ಧನ್ಯರು. ನಮಗೀಗ ಯಾವ ಶೋಕವೂ ಬಾಧಿಸುತ್ತಿಲ್ಲ. ನನ್ನ ಮಕ್ಕಳು ಬದುಕಿದ್ದರೆ ಏನು ಮಾಡುತ್ತಿದ್ದರೊ ಅದಕ್ಕಿಂತ ಅತ್ಯುನ್ನತವಾದ ಸೇವೆಯನ್ನು ನೀನು ಮಾಡಿ ನಮ್ಮನ್ನು ಸಂತೃಪ್ತಿಗೊಳಿಸಿರುವೆ. ನಿನ್ನ ಬಗ್ಗೆ ಪ್ರೀತಿ ಗೌರವಗಳ ಜೊತೆ ಪೂಜ್ಯ ಭಾವ ನನ್ನ ಮನ ತುಂಬಿದೆ. ಮಗಾ! ನಿನಗೆ ರಾಜ್ಯ ಮತ್ತು ಪ್ರಜೆಗಳ ಪರಿಪಾಲನೆ ಮಾಡಬೇಕಾದ ಕರ್ತವ್ಯವಿದೆ. ನೀನು ಅದಕ್ಕಾಗಿ ಅರಮನೆಯತ್ತ ಇಲ್ಲಿಂದ ತೆರಳ ಬೇಕು. ನಾನು ಈ ರೀತಿ ಹೇಳುವಲ್ಲಿ ನನ್ನ ವೈಯಕ್ತಿಕ ಸ್ವಾರ್ಥವೂ ಇದೆ. ನೀವು ಈ ತಪೋವನಕ್ಕೆ ನಮ್ಮನ್ನು ನೋಡಲು ಬರುವ ತನಕ ನಮಗೆ ಯಾವುದರ ಪರಿವೆಯೂ ಇರಲಿಲ್ಲ. ಅನ್ನ ಆಹಾರಾದಿಗಳನ್ನು ಪರಿತ್ಯಜಿಸಿ ತಪೋ ಮುಖರಾಗಿದ್ದೆವು. ನೀವೆಲ್ಲ ಬಂದ ಮೇಲೆ ನಮ್ಮ ತಪೋವನದ ಬದುಕಿನ ಉದ್ದೇಶ ಮರೆತು ಹೋದಂತಾಗಿದೆ. ತಪಃ ಯೋಗಿಯಾಗಲು ಬಂದು ಒಣ ತರಗೆಲೆ, ಗಾಳಿ ಮತ್ತು ನೀರನ್ನಷ್ಟೇ ಸ್ವೀಕರಿಸುತ್ತಿದ್ದವರು ಈಗ ಹೊಟ್ಟೆತುಂಬಾ ಆಹಾರ ಸೇವಿಸುತ್ತಾ ವಿಲಾಸಿಗಳಾಗಿದ್ದೇವೆ. ಇನ್ನೂ ನೀವು ಇಲ್ಲಿಯೆ ಇದ್ದರೆ ನಮ್ಮ ಗುರಿ ಸಾಧನೆ ಮಾಡಲು ಸಾಧ್ಯವಾಗದು. ಹಾಗಾಗಿ ಆದಷ್ಟು ಶೀಘ್ರವಾಗಿ ನೀವು ಇಲ್ಲಿಂದ ಹೊರಟು ಹಸ್ತಿನೆ ಸೇರಿದರೆ ನಮಗೂ ತಪಸ್ಸಿಗೆ ಬೇಕಾದ ಏಕಾಂತ ಲಭ್ಯವಾಗುತ್ತದೆ. ಗಾಂಧಾರಿ, ಕುಂತಿಯರಿಗೂ ಮರೆತು ಹೋಗಿರುವ ತಪಸ್ಸಿನ ಲಕ್ಷ್ಯ ಪುನರಪಿ ಜಾಗೃತವಾದೀತು. ಹಾಗಾಗಿ ನಮ್ಮ ಮನದಿಚ್ಚೆ ಪೂರೈಕೆಗೆ ಅವಕಾಶ ಮಾಡಿಕೊಡಬೇಕು ಮಗನೇ… ಮಹಿಪಾಲನಾದ ನಿನಗೆ ಸನ್ಮಂಗಲವಾಗಲಿ. ಶ್ರೀದೇವರ ಅನುಗ್ರಹದಿಂದ ಪ್ರಜಾಪರಿಪಾಲನೆಗೆ ಯಾವ ತೊಡಕೂ ಬಾರದಿರಲಿ ಎಂದು ಪ್ರಾರ್ಥಿಸಿ ಹರಸುತ್ತಿದ್ದೇನೆ. ನಮ್ಮ ಬಗ್ಗೆ ಯಾವ ವ್ಯಥೆಯನ್ನೂ ಪಡದೆ ಧೈರ್ಯದಿಂದ ಹೊರಟು ಬಿಡಿ ಏನಾದರೂ ಒಳ್ಳೆಯದಕ್ಕಾಗಿಯೆ ಆಗಲಿದೆ” ಎಂದು ಪಾಂಡವರಿಗೆ ಮರಳಿ ಹಸ್ತಿನೆ ಸೇರಲು ಆದೇಶ ನೀಡಿದನು.
ಧರ್ಮರಾಯನಿಗೆ ಈ ಮಾತು ಕೇಳಿ ಹೃದಯ ಹಿಂಡಿದಂತಾಯಿತು. ಹೆತ್ತ ತಾಯಿ, ಸಾಕಿ ಸಲಹಿದ ದೊಡ್ಡಪ್ಪ ದೊಡ್ಡಮ್ಮರನ್ನು ಬಿಟ್ಟು ಪುರದೆಡೆ ಹೊರಡುವ ಮನಸ್ಸಾಗಲಿಲ್ಲ. “ದೊಡ್ಡಪ್ಪಾ! ನನಗೊಂದು ಅನುಮತಿ ಕೊಡುವಿರಾ! ನಮ್ಮ ಪ್ರಜೆಗಳ ಜೊತೆ ನಾಲ್ವರು ತಮ್ಮಂದಿರು ಪತ್ನಿ ಸಹಿತರಾಗಿ ಇಲ್ಲಿಂದ ಹೊರಡಲಿ. ನನಗೆ ಮೊದಲೂ ಮತ್ತು ಈಗಲೂ ರಾಜ್ಯ, ಅಧಿಕಾರದ ಆಸೆ ಇಲ್ಲ. ಹಾಗಾಗಿ ನಾನಿಲ್ಲಿ ಇದ್ದು ನಿಮ್ಮ ಸೇವೆ ಮಾಡುತ್ತೇನೆ. ನನಗೊಬ್ಬನಿಗೆ ಇಲ್ಲಿರಲು ಒಪ್ಪಿಗೆ ನೀಡಿ, ಉಳಿದವರೆಲ್ಲರೂ ಹಸ್ತಿನಾವತಿಗೆ ತೆರಳಲಿ” ಎಂದು ಬೇಡಿಕೊಂಡನು.
ಆಗ ಕುಂತಿಮಾತೆ ಧರ್ಮರಾಯನನ್ನು ಕುರಿತು “ಮಗೂ ನಿನಗೆ ನಿನ್ನದ್ದಾದ ಧರ್ಮಪಾಲನೆಯಿದೆ. ನಮ್ಮ ಹಿರಿಯರ ಸದ್ಗತಿಗಾಗಿ ಮಾಡಬೇಕಾದ ನೈಮಿತ್ತಿಕ ಆಚಾರಗಳಿವೆ. ಕಾಲಾವಧಿಯ ಶ್ರಾದ್ಧ, ಪಿಂಡ ಪ್ರಧಾನಾದಿ ಕರ್ಮಗಳ ಹೊಣೆಯಿದೆ. ಪ್ರಜಾ ರಕ್ಷಣೆಯ ಜವಾಬ್ದಾರಿಯಿದೆ. ಕ್ಷತ್ರಿಯನಾದವ ಯಾವ ಸ್ಥಿತಿ ಪ್ರಾಪ್ತವಾದರೂ ಕರ್ತವ್ಯದಿಂದ ವಿಮುಖನಾಗಕೂಡದು. ಹಾಗಿರುವಾಗ ನೀನು ಇಲ್ಲಿಂದ ಹೊರಡ ಬೇಕು” ಎಂದು ಎಚ್ಚರಿಸಿ ಹೇಳಿದಳು.
ಆಗ ಧರ್ಮರಾಯ ಧರ್ಮಸಮ್ಮತವೂ, ತನ್ನ ಅಭಿಮತವೂ ಆದ ವಿಚಾರ ಹೇಳತೊಡಗಿದನು…
ಮುಂದುವರಿಯುವುದು…..






















































































