ಭಾಗ – 688
ಭರತೇಶ ಶೆಟ್ಟಿ,ಎಕ್ಕಾರು

ಮಹಾರಾಜ ಧರ್ಮರಾಯನನ್ನು ಹಿಂಬಾಲಿಸುತ್ತಾ ಸೇನಾಪತಿಗಳಾದ ಕೃಪಾಚಾರ್ಯರು, ಭೀಮಸೇನ, ಅರ್ಜುನ, ನಕುಲ, ಸಹದೇವ, ದ್ರೌಪದಿ, ಪುರ ಸ್ತ್ರೀಯರು, ಯುಯುತ್ಸು, ಧೌಮ್ಯರು ಮೊದಲಾದವರೆಲ್ಲರ ಜೊತೆ ಸಹಸ್ರ ಸಹಸ್ರ ಪುರ ಜನರು ಬರುತ್ತಿದ್ದಾರೆ. ಎಲ್ಲರೂ ರಥಗಳಿಂದಿಳಿದು ಕಾಲ್ನಡಿಗೆಯಲ್ಲಿ ಧೃತರಾಷ್ಟ್ರಾದಿಗಳಿರುವ ಆಶ್ರಮದತ್ತ ಸಾಗತೊಡಗಿದರು.
ಹೀಗೆ ಪಾಂಡವರು ತಪೋವನದಲ್ಲಿ ಸಂಚರಿಸುತ್ತಿರುವ ಸಮಯ ಅದ್ಯಾವ ಸೆಳೆತ ಉತ್ಪನ್ನವಾಯಿತೊ ಏನೋ! ಮಹಾತ್ಮರಾದ ಅನೇಕಾನೇಕ ಋಷಿ ಮುನಿಗಳು ಧಾವಿಸಿ ಇವರಿದ್ದಲ್ಲಿಗೆ ಬಂದರು. ಅವರೆಲ್ಲ ಎಲ್ಲೆಲ್ಲಿ ಇದ್ದರೊ! ಈ ಕ್ಷಣ ಎಲ್ಲರೂ ಪಾಂಡವರು ಮತ್ತು ಚಂದ್ರವಂಶದ ಹಿರಿಯರ ಭೇಟಿ ನೋಡಲು ಅತ್ಯುತ್ಸಾಹದಿಂದ ಬಂದು ಸೇರಿದ್ದಾರೆ. ಪಾಂಡವರು ಮಾತ್ರ ತನ್ನ ತಾಯಿ ದನವನ್ನು ಸೇರಲು ತವಕದಿಂದ ಓಡಿ ಬರುವ ಕರುವಿನಂತೆ ದಾಪುಗಾಲು ಹಾಕುತ್ತಾ ಮುಂದುವರಿಯುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೆ ಧೃತರಾಷ್ಟ್ರಾದಿಗಳು ಆಶ್ರಯಿಸಿರುವ ಆಶ್ರಮದೆಡೆ ಬಂದು ತಲುಪಿದರು. ಸಾಗರದೋಪಾದಿಯಲ್ಲಿ ಬಂದು ನೆರೆದ ಜನಸಾಗರವನ್ನು ಕಂಡು ಬೆರಗಾಗಿ ತಪೋವನದಲ್ಲಿದ್ದ ತಪಸ್ವಿಗಳು ಧೃತರಾಷ್ಟ್ರನಲ್ಲಿ ಅಯ್ಯಾ ರಾಜರ್ಷಿಯೆ! ಇವರೆಲ್ಲ ಯಾರು? ಪಾಂಡವರೆ? ಧರ್ಮರಾಯ, ಭೀಮಾರ್ಜುನರು, ನಕುಲ ಸಹದೇವರ ಬಗ್ಗೆ ಕೇಳಿದ್ದೇವೆ. ಅವರೆಲ್ಲರೂ ಇಲ್ಲಿ ಬಂದಿದ್ದಾರೆಯೆ? ಎಂದು ಕೌತುಕದ ಪ್ರಶ್ನೆ ಮುಂದಿರಿಸಿದರು. ಆಗ ಸಂಜಯನು ಮುಂದೆ ಬಂದು ಪಾಂಡವರೈವರನ್ನೂ ಕಂಡು ಒಬ್ಬೊಬ್ಬರನ್ನು ತೋರಿಸಿ ಅವರ ಸಾಧನೆ, ಶ್ರೇಷ್ಟತೆಗಳೆಲ್ಲವನ್ನು ವರ್ಣಿಸಿ ವಿವರಿಸಿ ಋಷಿಗಳಿಗೆ ಪರಿಚಯ ಮಾಡಿಸಿದನು. ನಂತರ ದ್ರೌಪದಿ ಹಾಗು ಪುರಸ್ತ್ರೀಯರ ಬಗ್ಗೆಯೂ ಸವಿವರವಾಗಿ ತಿಳಿಸಿದನು.
ಎಲ್ಲರ ಪರಿಚಯ ಹೇಳಿದಾಗ ಧೃತರಾಷ್ಟ್ರ ಗಾಂಧಾರಿಗೂ ಸ್ವತಃ ಕಾಣಲಾಗದಿದ್ದರೂ ಯಾರ್ಯಾರು ಬಂದಿದ್ದಾರೆ ಎಂಬ ವಿವರ ಪ್ರಾಪ್ತವಾಯಿತು. ವಿಚಾರ ತಿಳಿದು ಆತ್ಮಾನಂದವಾಯಿತು. ಪಾಂಡವರು ಹಿರಿಯರೆಲ್ಲರಿಗೂ ಪಾದಸ್ಪರ್ಶಿ ನಮನಗಳನ್ನು ಸಲ್ಲಿಸಿ ನಿಂತರು.
ಆಗ ಧೃತರಾಷ್ಟ್ರನು ಯುದಿಷ್ಠಿರನನ್ನು ಉದ್ದೇಶಿಸಿ “ಮಗಾ ಧರ್ಮರಾಯಾ! ನೀನು ನಿನ್ನ ಸೋದರರೊಡನೆ, ಪ್ರಜಾಪರಿವಾರದೊಡನೆ ಕ್ಷೇಮವಾಗಿರುವೆಯಲ್ಲವೆ? ನಿನ್ನ ಆಶ್ರಯದಲ್ಲಿರುವ ಮಂತ್ರಿಮಂಡಲ, ಗುರುವರ್ಯರೆಲ್ಲ ಕುಶಲ ತಾನೆ? ನ್ಯಾಯ ಮಾರ್ಗ ಪಾಲಕನಾದ ನಿನ್ನ ಕೋಶ ಸಮೃದ್ಧವಾಗಿದೆಯಲ್ಲವೆ? ಶತ್ರು, ಮಿತ್ರ ಮತ್ತು ಉದಾಸೀನರ ಬಗ್ಗೆ ಯಥಾ ಯೋಗ್ಯವಾಗಿ ನೀನು ವ್ಯವಹರಿಸುತ್ತಿರುವೆಯಲ್ಲ? ಬ್ರಾಹ್ಮಣರಿಗೇನೂ ಕೊರತೆಯಾಗುತ್ತಿಲ್ಲವಲ್ಲ? ಅತಿಥಿ ಸತ್ಕಾರಗಳು ಉಚಿತ ರೀತಿಯಲ್ಲಿ ಆಗುತ್ತಿದೆಯೆ? ಪಟ್ಟಣಿಗರು, ಸೇವಕರು, ಸ್ವಜನರೆಲ್ಲ ಸಮಾಧಾನದಿಂದಿದ್ದಾರೆಯೆ? ಚತುರ್ವರ್ಣೀಯರು ಸ್ವಕರ್ಮ ನಿರತರಾಗಿರುವರೆ? ಬಾಲರು, ವೃದ್ಧರು, ಸ್ತ್ರೀಯರು ಶೋಕ ಪಡುತ್ತಿಲ್ಲವಲ್ಲ? ನಿನ್ನ ಬಗ್ಗೆ ಪೂರ್ಣ ವಿಶ್ವಾಸವಿದೆ. ಆದರೂ ನನ್ನ ಮನಶಾಂತಿಗಾಗಿ ಕೇಳುತ್ತಿದ್ದೇನೆ” ಎಂದು ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದನು.
ಧರ್ಮರಾಯ ಎಲ್ಲಾ ಪ್ರಶ್ನೆಗಳಿಗೂ ಉತ್ತರನೀಡಿ ವೃದ್ಧನಾದ ಧೃತರಾಷ್ಟ್ರನನ್ನು ಸಂತೈಸಿದನು.ಆನಂತರ ಧರ್ಮರಾಯನು ಅವರೆಲ್ಲರ ಕ್ಷೇಮ ಸಮಾಚಾರ ವಿಚಾರಿಸಿ, ಕೃಶ ಶರೀರಿಗಳಾಗಿರುವ ಅಮ್ಮ ಕುಂತಿ, ಗಾಂಧಾರಿ, ಧೃತರಾಷ್ಟ, ಸಂಜಯರನ್ನು ನೋಡಿ ಬಹುವಿಧದಿಂದ ಕೊರಗಿದನು. ತಮ್ಮವರೆಲ್ಲರನ್ನೂ ಕಣ್ಣರಳಿಸಿ ನೋಡಿದಾಗ, ವಿದುರ ಅಲ್ಲೆಲ್ಲೂ ಕಾಣಲಿಲ್ಲ. ಕುತೂಹಲಿಗನಾಗಿ ವಿದುರನ ಬಗ್ಗೆ ವಿಚಾರಿಸಿ, ಅವರೆಲ್ಲಿ? ಎಂದು ಕೇಳಿದನು. ಆಗ ಧೃತರಾಷ್ಟ್ರ ತಪೋಮುಖನಾಗಿ ಘೋರ ತಪಸ್ಸನ್ನಾಚರಿಸುತ್ತಿರುವ ವಿದುರನ ಬಗ್ಗೆ ಪೂರ್ಣ ವಿವರ ನೀಡಿದನು. ನಿರಾಹಾರಿಯಾಗಿ, ಕೇವಲ ಉಸಿರಾಟದ ಗಾಳಿಯನ್ನು ಆಹಾರವಾಗಿಸಿ ಬಹು ಸಮಯದಿಂದ ಅಂತರ್ಮುಖಿಯಾಗಿರುವ ವಿಚಾರವನ್ನು ವಿವರಿಸಿ ತಿಳಿಸಿದನು. ಹೀಗೆ ವಿದುರನ ಬಗ್ಗೆ ಧೃತರಾಷ್ಟ್ರ ಹೇಳುತ್ತಿದ್ದಂತೆಯೆ ಕೃಶ ಶರೀರದ ಗಡ್ಡ ಬಿಟ್ಟ ಮುನಿಯಂತಹ ಸ್ವರೂಪದ ವ್ಯಕ್ತಿಯೋರ್ವ ಅಲ್ಲಿಗೆ ಆಗಮಿಸಿದನು. ಪಾಂಡವರನ್ನು, ನೆರೆದ ಜನಸಂದಣಿಯನ್ನು ಕೂಲಂಕುಶವಾಗಿ ದೂರದಿಂದ ನೋಡಿ ಕಣ್ತುಂಬಿಕೊಂಡು, ಅಲ್ಲಿ ನಿಲ್ಲದೆ ತನ್ನ ಪಾಡಿಗೆ ತಾನು ಹೊರಟು ಹೋದನು. ಆಗ ಅಲ್ಲಿದ್ದವರು ಗುರುತು ಹಿಡಿದು – ಇಲ್ಲಿಗೆ ಬಂದು ನಮ್ಮನ್ನೆಲ್ಲ ನೋಡಿ ಹೋದವರು ವಿದುರ ಮಹಾಶಯರಲ್ಲವೆ? ಎಂದು ಆಶ್ಚರ್ಯಚಕಿತರಾಗಿ ಕೇಳಿದರು.
ಆ ಕೂಡಲೆ ಧರ್ಮರಾಯನು ವಿದುರನನ್ನು ಮಾತನಾಡಿಸಿಲೆಂದು ವಿದುರನ ಬೆಂಬತ್ತಿ ಓಡಿದನು. ವೇಗವಾದ ಹೆಜ್ಜೆಗಳೊಂದಿಗೆ ಘೋರಾರಣ್ಯದೊಳಗೆ ನುಗ್ಗಿ ಹೋಗುತ್ತಿದ್ದ ವಿದುರನನ್ನು ಅನುಸರಿಸಿ ಧರ್ಮರಾಯನು ಹಿಂಬಾಲಿಸಿ ಓಡುತ್ತಾ ಹೋದನು.
ಮುಂದುವರಿಯುವುದು….






















































































