ಭಾಗ – 657
ಭರತೇಶ ಶೆಟ್ಟಿ,ಎಕ್ಕಾರು

ಪರಾಶರ ಮಹರ್ಷಿಯ ಕಥೆ ಹೇಳುತ್ತಾ “ಹೇ ಅರ್ಜುನಾ! ಬ್ರಹ್ಮರ್ಷಿ ವಸಿಷ್ಠರ ಬಗ್ಗೆ ಬಹಳಷ್ಟು ವಿಚಾರ ತಿಳಿದುಕೊಂಡಿರುವೆ. ವಸಿಷ್ಠರ ಮಗ ಶಕ್ತಿ ಮಹರ್ಷಿ. ಆತನ ಧರ್ಮ ಪತ್ನಿ ಅದೃಶ್ಯವಂತಿ ಗರ್ಭಿಣಿಯಾಗಿದ್ದ ಸಂದರ್ಭ ಶಾಪಗ್ರಸ್ಥ ನರಭಕ್ಷಕ ರಾಕ್ಷಸನಿಂದ ಪರಾಶರ ಮಹರ್ಷಿಯ ತಂದೆ ಶಕ್ತಿ ಮಹರ್ಷಿ ಕೊಂದು ತಿನ್ನಲ್ಪಟ್ಟಿದ್ದನು. ಅಂದಿನಿಂದ ವಸಿಷ್ಠರ ರಕ್ಷಣೆಯಲ್ಲಿ ಗರ್ಭಾವಸ್ಥೆಯಿಂದ ಜನನದವರೆಗೂ ಕಾಪಾಡಲ್ಪಟ್ಟಿದ್ದವನು ಪರಾಶರ. ಜನಿಸಿದಂದಿನಿಂದ ತಾಯಿ ಮತ್ತು ಅಜ್ಜನ ಆರೈಕೆಯಲ್ಲಿ ಬೆಳೆಯುತ್ತಿದ್ದ ಪರಾಶರ ಮಾತನಾಡಲು ಆರಂಭಿಸಿದಾಗ ವಸಿಷ್ಠರನ್ನು ತನ್ನ ತಂದೆಯೆಂದು ತಿಳಿದು ” ಅಪ್ಪಾ” ಎಂದು ಕರೆಯುತ್ತಿದ್ದನಂತೆ. ನಂತರ ವಸಿಷ್ಠರು ಮೊಮ್ಮಗನಿಗೆ ನಾನು ನಿನ್ನ ಅಪ್ಪನಲ್ಲ. ನಿನ್ನ ಅಪ್ಪನಾದ ಶಕ್ತಿ ಮಹರ್ಷಿಗೆ ನಾನು ಅಪ್ಪ ಎಂದು ತಿಳಿ ಹೇಳಿದ್ದರು. ಹಾಗಾದರೆ ನನ್ನ ಅಪ್ಪ ಎಲ್ಲಿದ್ದಾರೆ ಎಂಬ ಮೊಮ್ಮಗನ ಪ್ರಶ್ನೆಗೆ ಉತ್ತರವಾಗಿ ನರಭಕ್ಷಕ ರಾಕ್ಷಕನೋರ್ವ ನಿನ್ನ ಅಪ್ಪನಾದ ಶಕ್ತಿ ಮಹರ್ಷಿಯನ್ನು ಕೊಂದು ತಿಂದಿದ್ದಾನೆ ಎಂಬ ಸತ್ಯವನ್ನು ಹೇಳಿದ್ದರು. ಈ ಸತ್ಯ ಬಾಲನಾಗಿದ್ದ ಪರಾಶರನ ಎಳೆ ಮನಸ್ಸಿಗೆ ಹಸಿ ಗೋಡೆಗೆ ಕಲ್ಲೆಸೆದಂತೆ ಸ್ಥಿರ ಮತ್ತು ಅವಿಸ್ಮರಣೀಯವಾಗಿ ಉಳಿದು ಹೋಯಿತು. ಒಂದೆಡೆ ಈ ವಿಚಾರದ ನೋವು ಮನದಲ್ಲಿ ಶಾಶ್ವತವಾಗಿದ್ದರೂ ಪರಾಶರ ಬೆಳೆದು ಸಕಲ ವಿದ್ಯಾ ಪಾರಂಗತನಾದ ಬಳಿಕ ಸುದೀರ್ಘ ತಪಸ್ಸನ್ನಾಚರಿಸಿ ಸಾಧನೆಯನ್ನು ಮಾಡಿ ಸ್ಮೃತಿಕಾರರಾದರು. ಇಷ್ಟು ಜ್ಞಾನ ಸಂಪನ್ನರಾದರೂ ತನ್ನ ತಂದೆಯ ಹತ್ಯೆಗೈದ ರಾಕ್ಷಸರ ಬಗೆಗಿನ ಕೋಪ ತಣಿದಿರಲಿಲ್ಲ. ಯಾಕೊ ಏನೋ ಪರಾಶರರು ಅತ್ಯುಗ್ರ ಮುನಿಯಾಗಿ ವರ್ತಿಸತೊಡಗಿದ್ದರು. ಈ ಲೋಕ ಸ್ವಾರ್ಥದಿಂದ ತುಂಬಿದೆ. ಅಜ್ಜ ವಸಿಷ್ಠರು ಲೋಕಕಲ್ಯಾಣಾರ್ಥ ಕೈಗೊಂಡಿದ್ದ ಯಾಗಕ್ಕೆ ಸಹಾಯಿಯಾಗಿ ತರಿಸಿಕೊಂಡಿದ್ದ ಸುರಧೇನುವನ್ನು ಕ್ಷತ್ರಿಯ ರಾಜ ಬಯಸಿದ. ಇನ್ನುಳಿದ ಎಲ್ಲಾ ವರ್ಣದ ಜನರೂ ಕೇವಲ ಅವರವರ ಕುರಿತಾಗಿ ಮಾತ್ರ ಯೋಚಿಸಿ ಕೇವಲ ತಮ್ಮ ಶ್ರೇಯಸ್ಸಿಗಾಗಿ ಮಾತ್ರ ದುಡಿಯುವ ಮನಸ್ಸುಳ್ಳವರಾಗಿದ್ದರೆ. ಹಾಗಾಗಿ ಈ ಸೃಷ್ಟಿ ಉಳಿಯಬಾರದು. ನನ್ನ ಈ ತನಕದ ತಪಃಶಕ್ತಿಯನ್ನು ಕ್ರೋಧಾಗ್ನಿಯಾಗಿ ಪರಿವರ್ತಿಸಿ ಸರ್ವನಾಶಗೊಳಿಸುತ್ತೇನೆ. ಸೃಷ್ಟಿಕರ್ತನಾದ ಪರಮೇಷ್ಠಿಗೂ ಆತನ ಸೃಷ್ಟಿಯ ಗುಣ ನನ್ನ ಕಾರ್ಯದಿಂದ ತಿಳಿಯುವಂತಾಗಲಿ. ಎಂದು ಪರಾಶರರು ಸಮಸ್ತ ಲೋಕವನ್ನು ನಾಶಗೈಯಲು ಮುಂದಾಗಿದ್ದರು.
ತನ್ನ ಮೊಮ್ಮಗನ ಚಿಂತನೆಯ ವಿಷಯ ಒಂದರ್ಥದಲ್ಲಿ ನ್ಯಾಯಯುತವಾಗಿದ್ದರೂ, ಸಮಷ್ಟಿಯಾಗಿ ಆತನ ನಿರ್ಧಾರ ಸರಿಯಾದುದಲ್ಲ ಎಂದರಿತ ವಸಿಷ್ಠರು ಮೊಮ್ಮಗನಿಗೆ ಸೃಷ್ಟಿಯ ಕ್ರಮ, ನಿಯತಿಯ ನಿಯಮ, ಮೃತ್ಯುವಿನ ಕಾಯಕ, ಶಿಕ್ಷೆಗಳು ಈ ಎಲ್ಲಾ ವಿಚಾರಗಳ ಕುರಿತಾಗಿ ವಿಸ್ತೃತವಾಗಿ ವಿವರಿಸಿ ತಿಳಿ ಹೇಳಿದರು. ಮಾತ್ರವಲ್ಲ ಈ ತನಕ ಕಠಿಣ ಪರಿಶ್ರಮದಿಂದ ಸಾಧಿಸಿರುವ ತಪಃ ಶಕ್ತಿಯನ್ನು ವ್ಯರ್ಥಗೊಳಿಸಿ ಲೋಕನಾಶಕನಾಗುವುದು ಒಳಿತಲ್ಲ ಎಂದು ಬುದ್ಧಿಯ ಮಾತು ಹೇಳಿದರು. ಈಗ ಉತ್ಪನ್ನವಾಗಿರುವ ಲೋಕನಾಶಕ ಕ್ರೋಧಾಗ್ನಿಯನ್ನು ಪ್ರಯೋಗಿಸ ಬೇಕೆಂದಿದ್ದರೆ ಲೋಕದ ಜೀವನಾಧಾರವಾಗಿರುವ ಜಲದ ಮೇಲೆ ಎಸೆಯುವಂತೆ ತಿಳಿಸಿದರು. ಪರಾಶರರು ಅಜ್ಜನ ಮಾತಿಗೆ ಬೆಲೆಕೊಟ್ಟು ಕ್ರೋಧವನ್ನು ಉಪಶಮನ ಮಾಡಿಕೊಂಡು ಒಂದು ವಿಷಯಕ್ಕೆ ಅನುಮತಿ ಕೇಳಿದರು. “ಅಜ್ಜಾ! ಲೋಕಕಂಟಕರಾಗಿ ಮೆರೆದು ಬೆಳೆಯುತ್ತಿರುವ ರಾಕ್ಷಸ ಕುಲ ಸದಾ ನೆಮ್ಮದಿ ನಾಶದ ಕಾರ್ಯವನ್ನು ಮಾಡುತ್ತಿದೆ. ಒಂದೋ ಸ್ವರ್ಗಕ್ಕೆ ದಾಳಿ ಮಾಡಿ ಇಂದ್ರನನ್ನು ಪದಚ್ಯುತಗೊಳಿಸಿ ಅಷ್ಟ ದಿಕ್ಪಾಲಕರಿಗೆ ಬಾಧೆ ನೀಡುವುದು. ಅದಲ್ಲದಿದ್ದರೆ ಋಷಿಮುನಿಗಳ ಯಾಗಕ್ಕೆ ತೊಂದರೆ ನೀಡುತ್ತಾ ಪೀಡಿಸುವುದು. ನರರನ್ನು ಹಿಡಿದು ಭಕ್ಷಿಸುವುದು. ಇಂತಹ ಕಾಯಕ ನಿರತರಾಗಿ ರಾಕ್ಷಸರು ಎಲ್ಲೆಡೆ ಭಯವನ್ನು ಪಸರಿಸುತ್ತಿರುವ ಕುಲಜರಾಗಿದ್ದಾರೆ. ಹಾಗಾಗಿ ಆ ರಕ್ಕಸ ಕುಲ ಇನ್ನು ಉಳಿದು ಬೆಳೆಯಬಾರದು. ನನ್ನ ಕ್ರೋಧಾಗ್ನಿ ಸಮುದ್ರ ಪಾಲಾಗಿ ವ್ಯರ್ಥವಾಗ ಬಾರದು. ನನ್ನ ಬಾಲ್ಯದಿಂದಲೂ ನನ್ನ ಪಿತನನ್ನು ಕೊಂದು ತಿಂದ ರಾಕ್ಷಸ ಕುಲದ ಮೇಲೆ ಆಕ್ರೋಶವನ್ನು ಹೊಂದುತ್ತಾ ಬೆಳೆದಿದ್ದೇನೆ. ಹಾಗಾಗಿ ಈ ಸಮಯ ಮಹಾಯಾಗವೊಂದನ್ನು ಆರಂಭಿಸಿ ರಾಕ್ಷಸ ಕುಲದ ಸ್ತ್ರೀ, ಬಾಲಾದಿಗಳಿಂದ ಮೊದಲ್ಗೊಂಡು ತರುಣ, ವೃದ್ಧರವರೆಗೆ ಒಬ್ಬರನ್ನೂ ಬಿಡದೆ ಹೋಮಿಸಿ ಸರ್ವನಾಶಗೈಯುವೆ ಎಂದು ಅಬ್ಬರಿಸಿದನು. ಹಾಗೆ ಮಾಡ ಬಾರದು ಎಂದು ವಸಿಷ್ಠರು ನೀತಿಯ ಮಾತುಗಳನ್ನಾಡಿದರೂ ಕೇಳದೆ ಪರಾಶರರು ರಾಕ್ಷಸ ಯಾಗ ಆರಂಭಿಸಿದರು. ಸಂಕಲ್ಪದಂತೆ ಹೆಣ್ಣು ಹೆಂಗಸು, ಮಕ್ಕಳು, ವೃದ್ಧರು, ಯುವಕರು ಹೀಗೆ ರಕ್ಕಸರ ವಂಶವೆಲ್ಲ ಹೋಮಕ್ಕೆ ಬಿದ್ದು ನಾಶಗೊಳ್ಳತೊಡಗಿತು. ರಾಕ್ಷಸರು ಭಯಭೀತರಾಗಿ ದಾರಿಗಾಣದಾಗಿ ಹೋದರು. ಕಣ್ಣೆದುರು ಕ್ಷಯವಾಗುತ್ತಿರುವ ರಾಕ್ಷಸ ಕುಲದ ಸಂರಕ್ಷಣೆಗೆ ಉಪಾಯ ಸಿಗದೆ ಕಂಗಾಲಾದರು. ಪರಾಶರರ ರಾಕ್ಷಸ ಕುಲ ನಾಶಕ ಮಾರಣ ಹೋಮ ಸಾಗುತ್ತಿದೆ. ರಕ್ಕಸರು ಎಲ್ಲಿ ಅಡಗಿದ್ದರೂ ಸೆಳೆಯಲ್ಪಟ್ಟು ದಹಿಸಲ್ಪಡುತ್ತಿದ್ದಾರೆ.
ಮುಂದುವರಿಯುವುದು…



































