24.5 C
Udupi
Thursday, September 10, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -636

ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೬೩೬ ಮಹಾಭಾರತ

ಶ್ರೀಕೃಷ್ಣನು ಧರ್ಮರಾಯನಿಗೆ ಯಾಗಾರಂಭ ಮಾಡಬಹುದು ಎಲ್ಲವೂ ಸಿದ್ಧವಾಗಿದೆ ಎಂದು ಹೇಳಿದಾಗ, ಅಲ್ಲಿದ್ದ ಎಲ್ಲರೂ ಅನುಮೋದನೆ ನೀಡುತ್ತಾ ” ‘ಸಾಧು’ ‘ಸಾಧು’ ಕೃಷ್ಣ ಹೇಳಿರುವುದು ಸರಿಯಾಗಿದೆ. ಸುಮುಹೂರ್ತ ನೋಡಿ ಯಾಗಾರಂಭ ಮಾಡುವುದು ಉತ್ತಮ” ಎಂದು ಧ್ವನಿಗೂಡಿಸಿದರು. “ಶ್ರೀಕೃಷ್ಣನೇ ಹೇಳಿದ ನಂತರ ಈ ಕುರಿತಾಗಿ ವಿವೇಚನೆ ಮಾಡಿ ಕಾಲಕ್ಷೇಪ ಮಾಡುವುದು ಅನಗತ್ಯ. ಯಾಗ ಮಹತ್ಕಾರ್ಯ, ಸಂವತ್ಸರ ಕಾಲ ಪ್ರತೀಕ್ಷೆ ಮಾಡಿದ ಮಹಾಕ್ಷಣ ಶುಭಾರಂಭ ಕಾಣಲಿ ” ಎಂದು ಋಷಿಗಳು ತಮ್ಮ ಅಭಿಮತ ಸೂಚಿಸಿ ಮುಕ್ತಕಂಠದಿಂದ ಶುಭವಾಗಲಿ ಎಂದು ಹರಸಿ ಹಾರೈಸಿದರು.

ತಪೋನಿಧಿಗಳು, ಮಹರ್ಷಿಗಳು ಆಗಿರುವ ಧೌಮ್ಯರ ಮುಂದಾಳುತನದಲ್ಲಿ ಅಶ್ವಮೇಧ ಯಾಗ ನೆರವೇರಲಿಕ್ಕಿದೆ. ಇಂತಹ ಮಹಾತ್ಮರಾದ ಧೌಮ್ಯರು ಪಾಂಡವ ಪುರೋಹಿತರಾಗಿ ಒದಗುವಲ್ಲಿ ಒಂದು ಹಿನ್ನೆಲೆ ಕಥೆಯಿದೆ.

ಹಿಂದೆ ಪಾಂಡವರು ದಾಯಾದ್ಯ ಕಲಹದ ಪರಿಣಾಮ ದುರ್ಯೋಧನ ಹಾಗು ಶಕುನಿಯ ಕುಟಿಲ ತಂತ್ರಗಾರಿಕೆಯ ಕಾರಣದಿಂದ ವಾರಣಾವತದಲ್ಲಿ ಅರಗಿನ ಅರಮನೆಯಲ್ಲಿ ವಾಸಿಸುವಂತಾಗಿತ್ತು. ಬೃಹತ್ ಅರಗಿನ ಭವನ ರಚಿಸಿ ಪಾಂಡವರು ಅಲ್ಲಿ ನಿವಾಸಿಗಳಾದಾಗ ಸುಟ್ಟು ಕಥೆ ಮುಗಿಸುವ ಯೋಜನೆ ದುರ್ಯೋಧನನದ್ದಾಗಿತ್ತು. ಆದರೆ ವಿಧಿ ಸಂಕಲ್ಪ ಬೇರೆಯೆ ಆಗಿತ್ತು. ಭವನ ಪಾಂಡವರಿಂದಲೆ ಬೆಂಕಿಗಾಹುತಿಯಾಯಿತು. ಅವರು ಅಲ್ಲಿಂದ ಗುಹಾಮಾರ್ಗವಾಗಿ ತಪ್ಪಿಸಿ ಕೊಂಡು ಹೋಗಿ ಕಾಡಾಡಿಗಳಾಗಿದ್ದರು. ಹೀಗೆ ಇರುವ ಸಂದರ್ಭ ಒಂದು ಘಟನೆ ನಡೆದಿತ್ತು. ಅದೇನೆಂದರೆ ಅಂಗಾರಪರ್ಣ ಎಂಬ ಗಂಧರ್ವ ರಾತ್ರಿಯ ಹೊತ್ತು ಪಾಂಡವರು ರಾತ್ರಿಯ ಸಮಯ ತಮ್ಮಷ್ಟಕ್ಕೆ ದಿಕ್ಕು ದೆಸೆ ಅರಿಯದೆ ಕಾಡು ದಾರಿ ಹಿಡಿದು ಹೋಗುತ್ತಿದ್ದರು. ಆಗ ಗಂಧರ್ವರ ಕ್ರೀಡಾವನವನ್ನು ಅರಿಯದೆ ಪ್ರವೇಶಿಸಿದರು. ಇದನ್ನು ಕಾರಣವಾಗಿಸಿ ಚಾಕ್ಷುಷಿ ವಿದ್ಯಾ ಬಲದಿಂದ ತಾನು ಅದೃಶ್ಯನಾಗಿದ್ದು ಗಂಧರ್ವ ಪಾಂಡವರ ಮೇಲೆ ಆಕ್ರಮಣ ಮಾಡುತ್ತಾನೆ. ಆಕಸ್ಮಿಕವಾಗಿ ಆಕ್ರಮಣವಾದಾಗ ಸ್ವರಕ್ಷಣೆಗೆ ಮತ್ತು ಅದೃಶ್ಯನಾಗಿರುವ ವೈರಿಯನ್ನು ಪ್ರಕಟಗೊಳಿಸಲು ಧನುರ್ವೇದ ಪಾರಂಗತ ಅರ್ಜುನ ಅಲ್ಲಿಯೆ ಇದ್ದ ಒಂದು ಕಡ್ಡಿಯನ್ನು ಎತ್ತಿ ಅಭಿಮಂತ್ರಿಸಿ ಆಗ್ನೇಯಾಸ್ತ್ರವಾಗಿ ಅಗೋಚರ ಇದಿರಾಳಿಯ ಮೇಲೆ ಪ್ರಯೋಗಿಸುತ್ತಾನೆ. ತತ್ಪರಿಣಾಮವಾಗಿ ಆಗ್ನೇಯಾಸ್ತ್ರವನ್ನು ಎದುರಿಸಲಾಗದ ಅಂಗಾರಪರ್ಣ ಸೋತು ಶರಣು ಬಂದು ಕ್ಷಮಾಪ್ರಾರ್ಥಿಯಾಗುತ್ತಾನೆ. ಪಾಂಡವರ ಪರಿಚಯ ಕೇಳಿ ತಿಳಿದು ಸ್ನೇಹ ಬೆಳೆಸುತ್ತಾನೆ. ಬಳಿಕ ಪರಸ್ಪರ ಆತ್ಮೀಯ ಹಿತೈಷಿಗಳಾದ ಅರ್ಜುನನಿಗೂ ಗಂಧರ್ವನಿಗೂ ಹಲವಾರು ಅನೂಹ್ಯ ವಿಷಯದ ಬಗ್ಗೆ ಜಿಜ್ಞಾಸೆ ಸಾಗುತ್ತದೆ. ಕ್ಷತ್ರಿಯರಿಗೆ, ಅರಸರಿಗೆ ಪುರೋಹಿತ ಯಾಕೆ ಬೇಕು ಎಂಬ ಪೂರ್ಣ ವಿಸ್ತೃತ ವಿಚಾರವನ್ನು ತಿಳಿಸಲು ಆರಂಭಿಸುತ್ತಾನೆ. ಹೀಗೆ ಹೇಳುತ್ತಾ ಹೋಗುವಾಗ ಪಾಂಡವರು ಚಂದ್ರವಂಶೀಯರು ಎಂಬ ಸಂಗತಿ ತಿಳಿದ ಗಂಧರ್ವ ಅರ್ಜುನನ್ನು ತಾಪತ್ಯನೇ ಕೇಳು ಎಂದು ಸಂಭೋದಿಸಿ ಕರೆದು ಪುರೋಹಿತನ ಮಹತ್ವವನ್ನು ಮತ್ತು ಅಗತ್ಯವನ್ನು ವಿವರಿಸುತ್ತಿರುತ್ತಾನೆ. ಸೂಕ್ಷ್ಮ ಗ್ರಾಹಿಯಾದ ಅರ್ಜುನನಿಗೆ ಆಶ್ಚರ್ಯವಾಯಿತು! ಈ ಗಂಧರ್ವ ಚಂದ್ರವಂಶೀಯ, ಪಾಂಡು ಪುತ್ರರು ಪಾಂಡವರಾದ ನಮ್ಮನ್ನು “ತಾಪತ್ಯರು” ಎಂದು ಯಾಕಾಗಿ ಕರೆದಿರಬಹುದು? ಈ ಗೊಂದಲವನ್ನು ತಡೆ ಹಿಡಿದು ಆ ಪುರೋಹಿತರ ಮಹತ್ವವನ್ನು ವಿವರಿಸುತ್ತಿದ್ದ ಗಂಧರ್ವನಿಗೆ ಅಡ್ಡಿ ಪಡಿಸದೆ ಏಕಾಗ್ರತೆಯಿಂದ ಆಲಿಸತೊಡಗಿದ. ಗಂಧರ್ವ ವಿವರಿಸಲಾರಂಭಿಸಿದನು…

“ಹೇ ತಾಪತ್ಯನೇ! ನೀವು ಗುರು ಮುಖೇನ ಸಕಲ ಶಾಸ್ತ್ರ, ಶಸ್ತ್ರ ಪಾರಂಗತರಾಗಿದ್ದೀರಿ. ಹಾಗಿದ್ದೂ ನೀವೀಗ ಒಂದು ವಿಭಾಗದಲ್ಲಿ ದುರ್ಬಲರು ಹೌದು. ರಾತ್ರಿಯ ಈ ಹೊತ್ತು ದ್ರೋಣ ಶಿಷ್ಯ, ಧನುರ್ವೇದ ಪಾರಂಗತನಾದ ನೀನೋರ್ವ ಇರದೆ ಹೋಗುತ್ತಿದ್ದರೆ, ಆಗ್ನೇಯಾಸ್ತ್ರ ಪ್ರಯೋಗ ಮಾಡಲರಿಯದೆ ಇರುತ್ತಿದ್ದರೆ ನೀವಿಷ್ಟೂ ಮಂದಿ ನನ್ನಿಂದ ಹತರಾಗುತ್ತಿದ್ದಿರಿ. ಆದರೆ ದೈವಾಂಶ ಸಂಭೂತರು, ದೇವರ ಕೃಪೆಯುಳ್ಳವರಿ ನೀವು ಆಗಿರುವುದರಿಂದ ನಿಮ್ಮ ಅಂತ್ಯ ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿಯೊ ಏನೋ ಪರ್ಯಾಯ ರೂಪದಲ್ಲಿ ನೀವು ಬದುಕಿ ಉಳಿಯುವಂತಾಗಿದೆ. ಸ್ತ್ರೀ ಸಂಗದಲ್ಲಿ ಏಕಾಂತದಲ್ಲಿರುವ ಸಮಯ ಭಂಗವುಂಟಾದರೆ ಆಗ ಕೆಟ್ಟ ಕೋಪ ಆವರಿಸುತ್ತದೆ. ನನಗೂ ನಿಮ್ಮಿಂದ ಅಂತಹ ತೊಂದರೆ ಉಂಟಾಗಿ ಬಹಳಷ್ಟು ಕೋಪಾವೇಶಕ್ಕೆ ಒಳಗಾಗಿ ಆಕ್ರಮಿಸಿದ್ದೆನು. ಸಜ್ಜನರು, ಅತುಲ ವಿಕ್ರಮಿಗಳು ಆದ ನಿಮ್ಮ ಮೈತ್ರಿಗೆ ಈ ನನ್ನ ಕೋಪ ದಾರಿಯಾಯಿತಲ್ಲ ಎಂದು ಅತೀವ ಆನಂದ ನನಗಾಗುತ್ತಿದೆ. ಈಗಾಗಲೆ ನಿಮ್ಮಲ್ಲಿ ಎಷ್ಟು ಶಕ್ತಿ ಸಾಮರ್ಥ್ಯವಿದ್ದರೂ ಒಂದು ವಿಭಾಗದಲ್ಲಿ ದೌರ್ಬಲ್ಯವಿದೆಯೆಂದು ಹೇಳಿದೆನಲ್ಲಾ! ಅದೇನೆಂದರೆ ನಿಮ್ಮೊಂದಿಗೆ ಹಿತ ಕಾಯಬಲ್ಲ ಸಮರ್ಥ ಪುರೋಹಿತನಿಲ್ಲ. ಈಗ ನೀವು ಈ ವನ ಪ್ರವೇಶ ಮಾಡುವ ಸಮಯ ನಿಮ್ಮೊಂದಿಗೆ ಅಂತಹ ಅಗ್ನಿಹೋತ್ರಿ ಪುರೋಹಿತನಿರುತ್ತಿದ್ದರೆ ನಿಮ್ಮನ್ನು ತಡೆದು ನಿಲ್ಲಿಸಲು ಗಂಧರ್ವನಾದ ನನಗಾಗಲಿ, ಅಥವಾ ಯಕ್ಷರು, ರಾಕ್ಷಸರು, ಪಿಶಾಚರು, ಉರಗಗಳು ಮತ್ತು ಮನುಷ್ಯರು ಯಾರೆ ಆಗಲಿ ಅವರು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಈ ಸಮಯ ನೀವು ತದ್ವಿರುದ್ಧವಾಗಿ ಅಗ್ನಿಹೋತ್ರವಿಲ್ಲದವರಾಗಿ (ಯಜ್ಞ ಮಾಡದೆ/ ಮಾಡಿಸದೆ ಇರುವವರು) ಆಹುತಿ ನೀಡದವರಾಗಿ, ಇದನ್ನು ಮಾಡಬಲ್ಲ ಪುರೋಹಿತನಿಲ್ಲದ ಕಾರಣ ಅಂತಹ ರಕ್ಷಾ ಕವಚದಿಂದ ವಂಚಿತರಾಗಿ ಇದ್ದೀರಿ. ಆ ಕಾರಣದಿಂದ ನಿಮ್ಮನ್ನು ನಾನು ತಡೆದಿದ್ದೇನೆ. ಅದನ್ನು ಹೊರತಾಗಿ ಇಲ್ಲಿ ನಡೆದ ಪ್ರಕರಣ ನೆಪ ಮಾತ್ರವಷ್ಟೆ” ಎಂದು ವಿವರಿಸಿ ಹೇಳ ತೊಡಗಿದನು.

ಹೇ ತಪತೀ ವಂಶವರ್ಧನನೇ! ಇಷ್ಟು ಮಹತ್ತರವಾದ ದೌರ್ಬಲ್ಯ ಹೊಂದಿದ್ದರೂ ಗಂಧರ್ವನನ್ನು ನಾನು ಗೆದ್ದಿರುವೆ, ಹಾಗಾಗಿ ಪುರೋಹಿತರ ಅಗತ್ಯ ನಮಗಿದೆಯೆ ಎಂಬ ವಿಚಾರ ನಿನ್ನ ಮನದಲ್ಲಿ ಮೂಡಿರಬಹುದು. ಹಾಗಿದ್ದರೆ ಗಂಧರ್ವನಾದ ನನ್ನ ವಿರುದ್ಧ ನಿನಗೆ ಹೇಗೆ ಜಯ ಪ್ರಾಪ್ತಿಯಾಗಲು ಸಾಧ್ಯವಾಯಿತು ಎಂಬ ಸತ್ಯವನ್ನು ನಾನು ತಿಳಿದಿದ್ದೇನೆ. ಹೇಳುತ್ತೇನೆ ಕೇಳು, ಯಾವ ಕ್ಷತ್ರಿಯನೂ, ಎಂತಹ ಮಹಾಬಲ ಹೊಂದಿದ್ದರೂ ರಾತ್ರಿಯ ಹೊತ್ತು ಗಂಧರ್ವರಾದ ನಮ್ಮೆದುರು ಜಯ ಪಡೆಯುವುದು ಅಸಾಧ್ಯ. ಕಾರಣ ರಾತ್ರಿಯ ಹೊತ್ತು ಗಂಧರ್ವರಾದ ನಮ್ಮ ಬಲ ಬಹುಪಾಲು ವರ್ಧಿಸುತ್ತದೆ. ಆದರೂ ಸಮರ್ಥ ಪುರೋಹಿತನನ್ನು ಹೊಂದಿದ್ದು ಅಗ್ನಿಹೋತ್ರ, ಆಹುತಿಗಳನ್ನು ಅರ್ಪಿಸುತ್ತಿರುವ ಕ್ಷತ್ರಿಯ ರಾತ್ರಿಯ ಹೊತ್ತು ನಮಗೆದುರಾದರೆ ಸೋತರೂ ಸಾಯದೆ ಬದುಕಬಲ್ಲ, ಅಥವಾ ಬಲವರ್ಧಿಸಿ ನಮ್ಮನ್ನು ಗೆಲ್ಲುವ ಸಾಧ್ಯತೆಯೂ ಇದೆ. ನೀನು ತೀರಾ ವಿಶೇಷನಾಗಿರುವೆ. ಸತ್ಕುಲ ಪ್ರಸೂತನು, ದೈವಬಲ ಸಂಪನ್ನನು, ಜಿತೇಂದ್ರಿಯನು, ಬಹು ಸಮಯದಿಂದ ಬ್ರಹ್ಮಚರ್ಯೆ ಪಾಲಿಸಿ ಬದುಕುತ್ತಿರುವೆ. ಒಂದೊಮ್ಮೆಗೆ ಆಗ್ನೆಯಾಸ್ತ್ರ ಬಳಸುವ ಜಾಗೃತಿ ನಿನ್ನಲ್ಲಿ ಮೂಡುವಂತಾದ ಕಾರಣ ಅನಾಯಾಸವಾಗಿ ಜಯ ಸಾಧಿಸಿದೆ. ಅನ್ಯಥಾ ನಿನ್ನಿಂದ ಈ ಸಾಧನೆ ಕಷ್ಟ ಸಾಧ್ಯವಾಗುತ್ತಿತ್ತು. ಹಾಗಾಗಿ ನೀವು ಸಮರ್ಥರಾದ ಪುರೋಹಿತರನ್ನು ಹೊಂದುವ ಅಗತ್ಯವಿದೆ. ಅಂತಹ ಸಮರ್ಥ ಪುರೋಹಿತರಿಗೂ ಕೆಲವೊಂದು ಅರ್ಹತೆಗಳಿರಬೇಕು. ಆರು ಅಂಗಗಳ ವೇದಾಧ್ಯಯನ ನಿರತರು, ಶುದ್ಧರು, ಸತ್ಯವಾದಿಗಳು, ಧರ್ಮಾತ್ಮರು, ಸ್ಥಿರಚಿತ್ತರು ಆದವರು ಆಗಿರಬೇಕು. ರಾಜನು ಎಷ್ಟು ಬಲವಂತನಾಗಿದ್ದರೂ ಧರ್ಮಾತ್ಮ ಆಗಿದ್ದರೂ ಆಪತ್ಕಾಲದಲ್ಲಿ ಹಿತ ಕಾಯುವ ಪುರೋಹಿತನಿರಬೇಕು. ಸಾಮ್ರಾಜ್ಯವನ್ನು ಆಳುವ ಸಾಮ್ರಾಟನಾದರೂ ಪುರದ ಹಿತವನ್ನಷ್ಟೆ ಬಯಸುವ ಪುರೋಹಿತನ ಸಲಹೆ ಅಭಿಪ್ರಾಯವನ್ನು ಅರಿತು ಪಾಲಿಸಬೇಕು. ಹಾಗಾಗಿ ನಿಮಗೀಗ ಅಂತಹ ಓರ್ವ ಸಮರ್ಥ ಪುರೋಹಿತರೋರ್ವನ ಅಗತ್ಯವಿದೆ” ಎಂದು ಸೂಚಿಸಿದನು.

ಅರ್ಜುನನು ಸೂಕ್ಷ್ಮಮತಿಯಲ್ಲವೇ ಗಂಧರ್ವನ ಸಲಹೆ ಸರಿಯಾದುದು ಎಂಬ ಪೂರ್ಣ ವಿಶ್ವಾಸ ಮೂಡಿತು. ಆದರೆ ಈ ಕಾಡಿನಲ್ಲಿ ನಮಗೆ ಸಮರ್ಥರಾಗಬಲ್ಲ ಪುರೋಹಿತರು ಯಾರಿದ್ದಾರೆ? ಇಷ್ಟು ನಿರ್ದೇಶನ ನೀಡಿದ ಈ ಗಂಧರ್ವನಲ್ಲಿ ಆ ಕುರಿತಾಗಿ ಕೇಳಿದರೆ ತಿಳಿಯಬಹುದು. ಅದಕ್ಕೂ ಮೊದಲು ನನ್ನನ್ನು ತಾಪತ್ಯನೇ, ತಪತೀ ವಂಶವರ್ಧನನೇ ಎಂದೆಲ್ಲಾ ಸಂಭೋದಿಸಿದನಲ್ಲಾ? ಅದರ ಕಾರಣವೇನು ಎಂದು ಕೇಳಬೇಕೆಂದು ಕೌತುಕ ಹೆಚ್ಚಾಗಿ ಆ ರೀತಿ ಕರೆಯಲು ಕಾರಣವೇನೆಂದು ಗಂಧರ್ವನನ್ನು ಪ್ರಶ್ನಿಸಿದನು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page