ಭಾಗ – 713
ಭರತೇಶ್ ಶೆಟ್ಟಿ, ಎಕ್ಕಾರು

“ಧರ್ಮರಾಜಾ! ನೀನು ಪ್ರಜಾಪರಿಪಾಲಕನಾಗಿ ನಿನ್ನ ಧರ್ಮದಂತೆ ಆಶ್ರಯದ ಭರವಸೆ ನೀಡುತ್ತಿರುವೆ. ಆದರೆ ನಮಗೆ ಬೇರೆಯದ್ದೇ ಆದ ಯೋಚನೆಗಳಿವೆ. ಹಾಗಾಗಿ ಅವರವರ ಮುಂದಿನ ಜೀವನದ ನಿರ್ಧಾರಗಳನ್ನು ಅವರವರು ಪ್ರಕಟಿಸುತ್ತಾರೆ. ಆ ಬಳಿಕ ಹಾಗೆ ನಡೆದುಕೊಳ್ಳಲು ನೀನು ಸ್ವಾಧಿಕಾರ ನೀಡಬೇಕು ಎಂದು ಪ್ರಾರ್ಥಿಸುತ್ತೇವೆ” ಎಂದು ಕೇಳಿಕೊಂಡಳು.
ಸತ್ಯಭಾಮೆ ಮತ್ತು ಮೂವರು ಶ್ರೀಕೃಷ್ಣನ ಅರಸಿಯರು ಮುಂದೆ ಬಂದು ನಮಗಿನ್ನು ಜೀವನದಲ್ಲಿ ಯಾವ ಅಪೇಕ್ಷೆಯೂ ಇಲ್ಲ. ಹಾಗಾಗಿ ಕಾನನ ಸೇರಿ ತಪಸ್ಸನ್ನು ಆಚರಿಸಿ ಉಳಿದ ಜೀವಿತಾವಧಿ ಸಾರ್ಥಕಗೊಳಿಸುವ ಇಚ್ಚೆ ಹೊಂದಿದ್ದೇವೆ. ಅನುಮತಿ ನೀಡಬೇಕು ಎಂದು ಕೇಳಿಕೊಂಡರು. ಕೃಷ್ಣನ ಆಪ್ತನಾಗಿದ್ದ ಅಕ್ರೂರನ ಪತ್ನಿಯರು ಮತ್ತು ಕೆಲವು ಹಿರಿಯರು ತಪೋವನ ಸೇರಿ ವಾನಪ್ರಸ್ಥ ಜೀವನ ಸಾಗಿಸುವ ಇಚ್ಚೆ ವ್ಯಕ್ತ ಪಡಿಸಿ ಅಪ್ಪಣೆ ಬೇಡಿದರು. ಕೃಷ್ಣನ ಪಟ್ಟಮಹಿಷಿಯರಾದ ರುಕ್ಮಿಣಿ ದೇವಿ, ಶೈಬ್ಯೆ, ಹೈಮವತಿ, ಜಾಂಬವತಿ ಈ ನಾಲ್ವರ ನಿರ್ಧಾರ ಭಿನ್ನವಾಗಿತ್ತು. ಇನ್ನು ಅರೆಕ್ಷಣವೂ ಬದುಕಿರುವ ಅಪೇಕ್ಷೆ ಅವರಿಗಿರಲಿಲ್ಲ. ಅಗ್ನಿ ಪ್ರವೇಶ ಮಾಡಿ ಸಂಕಲ್ಪ ಶಕ್ತಿಯಿಂದ ತಮ್ಮ ದೇವರನ್ನು ಸೇರಿಕೊಳ್ಳುವ ನಿರ್ಧಾರ ಪ್ರಕಟಿಸಿದರು. ಇಷ್ಟಾದ ಬಳಿಕ ಉಳಿದಿರುವ ದ್ವಾರಕೆಯ ಪುರಜನರು ಮತ್ತು ಮಕ್ಕಳು ಧರ್ಮರಾಜನು ಏನು ಅಪ್ಪಣೆ ಮಾಡುವನೊ ಹಾಗೆ ಅನುಸರಿಸಿ ಬದುಕುತ್ತೇವೆ ಎಂದು ಒಡಂಬಟ್ಟರು.
ಧರ್ಮಮೂರ್ತಿಯಾದ ಯುಧಿಷ್ಠಿರನ ಬಳಿ ಯಾವ ಆಯ್ಕೆಯೂ ಇರಲಿಲ್ಲ. ಯಾರು ಏನು ಮಾಡುತ್ತೇವೆ ಎಂದು ಕೇಳಿಕೊಂಡರೊ ಅಂತೆಯೆ ನಡೆದುಕೊಳ್ಳಲು ಸ್ವಾತಂತ್ರ್ಯವಿತ್ತು ಸಮ್ಮತಿಸದೆ ಅನ್ಯ ಮಾರ್ಗವಿಲ್ಲ ಎಂದು ನಿರ್ಣಯಿಸಿದನು. ತಪಸ್ಸಿಗೆ, ತಪೋವನಕ್ಕೆ ಹೋಗುವವರು ವಂದಿಸಿ ಹೊರಟು ಹೋದರು. ರುಕ್ಮಿಣಿಯಾದಿ ಕೃಷ್ಣನ ರಾಣಿಯರು ವಿಧಿಗಳನ್ನು ಪೂರೈಸಿ ಅಗ್ನಿಪ್ರವೇಶದ ವ್ಯವಸ್ಥೆ ಮಾಡಿಸಿ ತಮ್ಮ ಇಚ್ಚೆ ನೆರವೇರಿಸಿಕೊಂಡರು. ಪಾಂಡವರಿಗೆ ಈ ಎಲ್ಲಾ ಘಟನೆಗಳಿಂದ ಬಹಳಷ್ಟು ದುಃಖ ಆಯಿತಾದರೂ ಸಹಿಸಿಕೊಳ್ಳುವುದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಅವರು ಉಳಿದ ಯಾದವರನ್ನು ಕರೆದುಕೊಂಡು ಹಸ್ತಿನಾವತಿಗೆ ತೆರಳಿದರು. ಜೊತೆ ಬಂದ ಯಾದವರಿಗೆಲ್ಲ ಸೂಕ್ತ ವಸತಿ, ವಸನ, ಊಟೋಪಚಾರದ ವ್ಯವಸ್ಥೆ ಮಾಡಿಸಿದರು.
ಬಳಿಕ ಪಾಂಡವರು ಗತಿಸಿ ಹೋದ ಆತ್ಮೀಯ ಬಂಧುಗಳಾದ ಕೃಷ್ಣ ಬಲರಾಮರು, ವಸುದೇವ ದೇವಕಿ, ಸಾಂಬ ಸಾತ್ಯಕಿಯಾದಿ ಎಲ್ಲಾ ಯಾದವರು, ಕೃಷ್ಣನ ರಾಣಿಯರು ಹೀಗೆ ಎಲ್ಲರಿಗೂ ಪ್ರತ್ಯೇಕ ತರ್ಪಣ, ಸದ್ಗತಿಗಾಗಿ ಧಾರ್ಮಿಕ ಪ್ರಕ್ರಿಯೆಗಳು, ಅನ್ನದಾನಾದಿ ಕರ್ಮಗಳನ್ನು ನೆರವೇರಿಸಿದರು. ಶ್ರೀಕೃಷ್ಣ ಪರಮಾತ್ಮನ ಹೆಸರಿನಲ್ಲಿ ಒಂದು ಸಾವಿರದ ನೂರ ಎಂಟು ಸವತ್ಸಧೇನು (ಹಾಲು ನೀಡುವ ದನ ಮತ್ತು ಕರು) ಗಳನ್ನು ಸತ್ಪಾತ್ರರಿಗೆ ದಾನ ಮಾಡಿದರು. ಬಲಭದ್ರ, ವಸುದೇವ, ದೇವಕಿ, ಕೃಷ್ಣನ ರಾಣಿಯರು ಹೀಗೆ ಎಲ್ಲರ ಹೆಸರಿನಲ್ಲೂ ವಿಶೇಷ ದಾನಗಳನ್ನು ಹೇರಳವಾಗಿ ನೀಡಿದರು. ಸಮಗ್ರ ಯಾದವರ ಹೆಸರಿನಲ್ಲಿ ಅತಿ ವಿಶೇಷವಾದ ದಾನ ಧರ್ಮಗಳನ್ನು ಕೆಲ ದಿನಗಳವರೆಗೆ ನೆರವೇರಿಸಿದರು. ಹೀಗೆ ಗತಿಸಿದ ಬಂಧುಗಳ ಸದ್ಗತಿಗಾಗಿ ಏನೇನು ಮಾಡಬೇಕಿತ್ತೊ ಅದೆಲ್ಲವನ್ನೂ ವಿಧಿವತ್ತಾಗಿ ಪೂರೈಸಿದ ಪಾಂಡವರು ಮತ್ತೆ ಕೆಲದಿನಗಳ ಕಾಲ ಗಂಗಾ ತೀರದಲ್ಲಿ ತರ್ಪಣ, ಹವನ ಹೋಮ, ಯಾಗ ಯಜ್ಞಾದಿಗಳನ್ನು ದೇವತಾ ಸಂಪ್ರೀತಿಗಾಗಿ ನೆರವೇರಿಸಿದರು.
ಹೀಗೆ ಮಾಡಬೇಕಾದುದೆಲ್ಲವನ್ನೂ ಮಾಡಿ ಪೂರೈಸಿ ಪಾಂಡವರು ಹಸ್ತಿನೆಗೆ ಮರಳಿದರು. ಉಳಿದಿರುವ ಯಾದವರ ಕುರಿತಾಗಿ ಯೋಚಿಸಿ ಮಹತ್ತರವಾದ ತೀರ್ಮಾನ ಕೈಗೊಂಡರು. ಯಾದವರು ಪಾಂಡವರಿಗೆ ಅತ್ಯಾಪ್ತ ಬಂಧುಗಳಾಗಿದ್ದರು. ಆ ಪವಿತ್ರ ಬಾಂಧವ್ಯ ಹೊಂದಿದ್ದ ಯಾದವರ ವಂಶಾಭಿವೃದ್ಧಿಗೆ ಉಳಿದಿರುವವರನ್ನು ಉಚಿತ ರೀತಿಯಲ್ಲಿ ನಡೆಸಿಕೊಳ್ಳಬೇಕು. ಅದಕ್ಕಾಗಿ ಅವರಿಗೂ ಸಣ್ಣ ಸಣ್ಣ ರಾಜ್ಯಗಳನ್ನಿತ್ತು ಗಂಡು ಮಕ್ಕಳಿಗೆ ಪಟ್ಟಾಭಿಷೇಕ ಮಾಡಿಸಿದರು. ಕೃತವರ್ಮನ ಮಗನಿಗೆ ಮೃತಿಕಾವನ, ಅಶ್ವಪತಿಗೆ ಖಾಂಡವ ವನ ಪ್ರಾಂತ್ಯ, ಸಾತ್ಯಕಿಯ ಮಗನಿಗೆ ಸರಸ್ವತೀ ತೀರ ಪ್ರದೇಶ, ಶ್ರೀಕೃಷ್ಣನ ಮೊಮ್ಮಗ ವಜ್ರನಿಗೆ ಇಂದ್ರಪ್ರಸ್ಥದ ಅಧಿಕಾರ ಹೀಗೆ ಇನ್ನೂ ಹಲವು ಸಮರ್ಥರಿಗೆ ವಿಭಾಗಿಸಿ ಅಧಿಕಾರ, ಸ್ಥಾನ ಮಾನಗಳನ್ನು ನೀಡಿ ವ್ಯವಸ್ಥೆ ಮಾಡಿಸಿದರು.ದ್ವಾರಕೆಯಿಂದ ಬಂದಿದ್ದ ಯಾದವರು ಅವರವರ ಅರಸರ ರಾಜ್ಯದಲ್ಲಿ ಪ್ರಜೆಗಳಾಗಿ ನೆಲೆ ಪಡೆದರು. ಹೀಗೆ ಅವರಿಗೊಂದು ಭದ್ರ ವ್ಯವಸ್ಥೆಯಾಯಿತು.
ಧರ್ಮರಾಯ ಚಕ್ರವರ್ತಿಯಾಗಿ ಆರ್ಯಾವರ್ತವನ್ನು ಏಕ ಛತ್ರದಡಿ ಆಳ್ವಿಕೆ ಮಾಡುತ್ತಾ ಪೂರ್ಣಾಧಿಕಾರಿಯಾಗಿರುವ ಕಾಲವಿದು. ವೈರಿಗಳಿಲ್ಲ, ಅಡ್ಡಿ ಆತಂಕಗಳನ್ನು ತಂದೊಡ್ಡುವವರಿಲ್ಲ. ಎಲ್ಲಾ ತನ್ನ ಅಧೀನದಲ್ಲಿ ಇದೆ. ಹಾಗಿದ್ದರೂ ಪಾಂಡವರಿಗೇಕೊ ಜೀವನ ನೀರಸ ಎನಿಸತೊಡಗಿದೆ. ಶ್ರೀಕೃಷ್ಣ ಜೊತೆಗಿರುವಾಗ ಇದ್ದ ಸ್ವಾರಸ್ಯ ಈಗ ಬದುಕಿನಲ್ಲಿ ಉಳಿದಿಲ್ಲ ಎಂದು ಅನಿಸುತ್ತಿದೆ. ಮಾತೆ ಕುಂತಿಯಿಲ್ಲ. ಸದಾ ಜಾಗೃತರಾಗಿರುವಂತೆ ಮಾಡುತ್ತಿದ್ದ ಕೌರವರಿಲ್ಲ. ಧರ್ಮ ಜಿಜ್ಞಾಸೆಗೆ ವಿದುರನಿಲ್ಲ. ನೀತಿ ಬೋಧನೆಗೆ ಭೀಷ್ಮಾಚಾರ್ಯರಿಲ್ಲ. ಅಧ್ಯಯನದ ಪಕ್ವತೆ ಒರೆಗೆ ಹಚ್ಚಲು ಗುರು ದ್ರೋಣರಿಲ್ಲ. ಹೀಗೆ ಎತ್ತ ನೋಡಿದರೂ ಬಿಕೋ ಎನಿಸುವ ಸಪ್ಪೆ ಬದುಕು ಪಾಂಡವರಿಗೆ ಔದಾಸಿನ್ಯವನ್ನು ಉಂಟು ಮಾಡುತ್ತಿತ್ತು. ಯಾವುದರಲ್ಲೂ ಉಲ್ಲಾಸ ಉತ್ಸಾಹವಿಲ್ಲ. ಹೀಗಿರಲು ಧರ್ಮರಾಯ ತನ್ನ ತಮ್ಮಂದಿರನ್ನೂ ದ್ರೌಪದಿಯನ್ನೂ ಕರೆದು ಜಿಜ್ಞಾಸೆ ಮತ್ತು ಸಮಾಲೋಚನೆಗೆ ತೊಡಗಿದನು. ಈ ಜಗತ್ತು, ಸೃಷ್ಟಿ, ಮತ್ತು ಜೀವನದ ಕುರಿತಾಗಿ ಅವಲೋಕಿಸಲಾರಂಭಿಸಿದನು. “ಸೊಂಪಾಗಿ ನಳನಳಿಸುವ ಮರ ಸಮಯ ಸಂದಾಗ ಎಲ್ಲವನ್ನೂ ಕಳಕೊಂಡು ಬೋಳಾಗುತ್ತದೆ. ಪುನಃ ಹೊಸ ಚಿಗುರಿನಿಂದ ಆರಂಭಗೊಂಡು ಮತ್ತೆ ಅದೇ ಪ್ರಕ್ರಿಯೆ ಪುನರಾವರ್ತನೆಯಾಗುತ್ತದೆ. ಮಿಡಿಯಾಗಿ ಮೂಡಿ, ಬಲಿತು ಕಾಯಿಯಾಗಿ ಹಣ್ಣಾಗಿ ಮಾಗಿ ಕೊನೆಗೆ ಉದುರುತ್ತದೆ. ಮಳೆಗಾಲದಲ್ಲಿ ಬೋರ್ಗರೆದು ಹರಿವ ನದಿ, ತುಂಬಿ ತುಳುಕುವ ಸರೋವರ ಬೇಸಗೆಯ ಕಾಲ ಬಂದಾಗ ಬತ್ತಿ ಬರಿದಾಗುತ್ತದೆ. ಮತ್ತೆ ಕಾಲ ಚಕ್ರ ತಿರುಗಿದಾಗ ತುಂಬಿ ಹರಿಯುತ್ತದೆ. ಭೂಮಿಗೂ ಕತ್ತಲೆಯ ರಾತ್ರಿಯಿದೆ ಮತ್ತೆ ಬೆಳಗುವ ಹಗಲಿದೆ. ಇದು ಪ್ರಾಕೃತ ಸತ್ಯವಾದರೆ ನಮಗೂ ಅನ್ವಯವಾಗುವುದಿಲ್ಲವೆ? ವೃದ್ಧಾಪ್ಯ ಆವರಿಸುವಾಗ ಮಾಗಿ ಹಣ್ಣಾಗುತ್ತಿರುವಂತೆ ಭಾಸವಾಗುತ್ತಿಲ್ಲವೆ?” ಎಂದು ಪ್ರಶ್ನೆ ಮಾಡಿದನು.
ಕೇಳಿಸಿಕೊಳ್ಳುತ್ತಿದ್ದ ಪಾಂಡವರು, ದ್ರೌಪದಿ ಯೋಚನೆಯಲ್ಲಿ ಮಗ್ನರಾದರು ಹೊರತು ಉತ್ತರ ನೀಡಲಿಲ್ಲ. ಆಗ ಮತ್ತೆ ಮಾತಿಗೆ ಆರಂಭಿಸಿದ ಧರ್ಮರಾಯ ತಮ್ಮ ಬದುಕಿನಲ್ಲಿ ಹಾದು ಬಂದ ಪುಟಗಳನ್ನು ತಿರುವಿ ನೋಡುತ್ತಿರುವಂತೆ ನುಡಿಯ ತೊಡಗಿದನು. “ನಾವು ಜನಿಸಿದ್ದು ಕಾಡಿನಲ್ಲಿ. ಬಾಲ್ಯದ ಆರಂಭ ಅಲ್ಲಿಯ ಆಶ್ರಮದಲ್ಲಿ ಸುಖವಾಗಿತ್ತು. ಅಪ್ಪನ ಮರಣದ ಬಳಿಕ ಅರಮನೆಗೆ ಬಂದೆವು. ಮತ್ತೆ ವಿದ್ಯಾರ್ಜನೆಗೆ ಗುರುಗಳ ಆಶ್ರಮ – ಅದೂ ಅರಣ್ಯ ಪ್ರದೇಶ. ನಂತರ ಮರಳಿ ಅರಮನೆಗೆ ಬಂದರೂ ಸ್ವಲ್ಪ ಸಮಯದಲ್ಲಿ ವಾರಣಾವತಕ್ಕೆ ಹೋಗಬೇಕಾಯಿತು. ಅಲ್ಲಿನ ಅರಗಿನ ಅರಮನೆ ಅಗ್ನಿಗಾಹುತಿಯಾಗಿ ಸತ್ತಿದ್ದೇವೆ ಎಂಬ ವದಂತಿಯಾದರೂ, ನಾವು ಮಾತ್ರ ಮತ್ತೆ ವನವಾಸಿಗಳಾಗಿದ್ದೆವು. ದ್ರೌಪದಿ ಸ್ವಯಂವರದಿಂದ ಪ್ರಕಟರಾಗಿ ಮತ್ತೆ ಹಸ್ತಿನೆಗೆ ಬರುವಂತಾಯಿತು. ಇಂದ್ರಪ್ರಸ್ಥ, ರಾಜಸೂಯ ಯಾಗ ನಡೆದು ಅಭಿಷಿಕ್ತನಾದರೂ ದ್ಯೂತ ಪ್ರಕರಣದಿಂದ ಮತ್ತೆ ವನವಾಸ ಅಜ್ಞಾತವಾಸ ಹೀಗೆ ನಮ್ಮ ಬದುಕು ಸಾಗಿತ್ತು. ಮಹಾಭಾರತ ಯುದ್ಧ, ಅಶ್ವಮೇಧ ಯಾಗ ಹೀಗೆ ಮಹತ್ತರವಾದ ಸಾಹಸಮಯ ಕಾರ್ಯಗಳು ಶ್ರೀಕೃಷ್ಣನ ದಯೆಯಿಂದ ಜಯಪ್ರದವಾಗಿ ಸಾಗಿತು. ನಾವೀಗ ಸ್ವತಂತ್ರ, ನಿರಾತಂಕ ಸಾಮ್ರಾಟರಾಗಿದ್ದೇವೆ. ನಮ್ಮ ಬಂಧುಗಳು ಮಡಿದರು, ನಮ್ಮ ಮಕ್ಕಳು, ಮಾತೆ ಕುಂತಿ, ದೊಡ್ಡಪ್ಪ, ದೊಡ್ಡಮ್ಮ, ಕೃಷ್ಣ ಬಲರಾಮ, ಯಾದವರು… ಹೀಗೆ ನಾವು ಕಳಕೊಳ್ಳುತ್ತಾ ಬರಬೇಕಾಯಿತು. ಈಗ ನನ್ನ ಪ್ರಶ್ನೆ ಸುಖ ಮತ್ತು ದುಃಖ ಎಂದರೇನು? ನಮಗೆ ಯಾವುದು ಹಿತ? ಯಾವುದು ವೇದನೆ ನೀಡುತ್ತಿದೆ?” ನೀವು ಹೇಳಬಲ್ಲಿರಾ?” ಎಂದು ಪ್ರಶ್ನೆ ಮಾಡಿದನು.
ಮುಂದುವರಿಯುವುದು….

























































































