ಕೇರಳದಿಂದ ಬೆಂಗಳೂರಿಗೆ ಕರೆತಂದು ಕೃತ್ಯ

ಬೆಂಗಳೂರು: ಬೇರೊಬ್ಬ ಯುವಕನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ನವೆಂಬರ್ 27ರಂದು ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಸ್ತಾನ್ ದರ್ಗಾ ಬಳಿಯ ರಿಜೆನ್ಸಿ ಇನ್ ಲಾಡ್ಜ್‌ನಲ್ಲಿ ನಡೆದಿದೆ.
ಕೇರಳ ಮೂಲದ ಗಂಗಾ (22) ಕೊಲೆಯಾದ ಯುವತಿ. ಹತ್ಯೆ ಆರೋಪದ ಮೇಲೆ ಆಕೆಯ ಪ್ರಿಯಕರ ಗೋಕುಲ್ ಕೃಷ್ಣ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕುಲ್ ಕೃಷ್ಣ ಹಾಗೂ ಗಂಗಾ ಈ ಹಿಂದೆ ಬೆಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗೋಕುಲ್ ಕೃಷ್ಣ ಗಂಗಾಗೆ ಸೀನಿಯರ್ ಆಗಿದ್ದು ಸದ್ಯ ಆತ ನರ್ಸಿಂಗ್ ಆಕಾಂಕ್ಷಿಗಳಿಗೆ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಪರಿಚಯ ಹೊಂದಿದ್ದ ಇವರಿಬ್ಬರು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನರ್ಸಿಂಗ್ ಉದ್ಯೋಗ ಕೊಡಿಸುವಂತೆ ಗಂಗಾ ಪ್ರಿಯಕರನನ್ನು ಕೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಗುರುವಾರ ಇಬ್ಬರೂ ಕೇರಳದಿಂದ ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ತಂಗಿದ್ದರು.
ಈ ನಡುವೆ ಗಂಗಾ ಬೇರೊಬ್ಬ ಯುವಕನೊಂದಿಗೆ ಆತ್ಮೀಯವಾಗಿದ್ದಾಳೆ ಹಾಗೂ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ವಿಚಾರವಾಗಿ ಗೋಕುಲ್ ಕೃಷ್ಣ ಆಕೆಯ ಮೇಲೆ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಮದ್ಯ ಸೇವಿಸಿದ್ದ ಆರೋಪಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಗಂಗಾಳೊಂದಿಗೆ ಜಗಳವಾಡಿದ್ದಾನೆ. ಶುಕ್ರವಾರ ಬೆಳಗ್ಗೆಯೂ ಇದೇ ವಿಷಯಕ್ಕೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ.
ಜಗಳ ತೀವ್ರಗೊಂಡಾಗ ಕೋಪಗೊಂಡ ಗೋಕುಲ್ ಕೃಷ್ಣ, ಮೊದಲೇ ಖರೀದಿಸಿ ತಂದಿದ್ದ ಚಾಕುವಿನಿಂದ ಗಂಗಾಳ ಹೊಟ್ಟೆಗೆ ನಾಲ್ಕೈದು ಬಾರಿ ಇರಿದು ಹತ್ಯೆಗೈದಿದ್ದಾನೆ. ಬಳಿಕ ಲಾಡ್ಜ್ ಮ್ಯಾನೇಜರ್‌ಗೆ ಕರೆ ಮಾಡಿ ಘಟನೆ ತಿಳಿಸಿದ್ದಾನೆ. ಮ್ಯಾನೇಜರ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಗಾಂಧಿನಗರ ಉಪವಿಭಾಗದ ಡಿಸಿಪಿ ಲಕ್ಷ್ಮಿ ಗಣೇಶ, ಶುಕ್ರವಾರ ಬೆಳಗ್ಗೆ ಗೋಕುಲ್ ಕೃಷ್ಣ ಮತ್ತು ಗಂಗಾ ನಡುವೆ ಜಗಳ ನಡೆದಿದ್ದು, ಆರೋಪಿ ತಾನು ಖರೀದಿಸಿ ತಂದಿದ್ದ ಚಾಕುವಿನಿಂದ ಯುವತಿಯನ್ನು ಇರಿದು ಕೊಂದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

























































































