25.8 C
Udupi
Friday, August 21, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 619

ಭರತೇಶ್ ಶೆಟ್ಟಿ ,ಎಕ್ಕಾರು

ಬಕದಾಲ್ಭ್ಯರು ಅಶ್ವಮೇಧ ಯಾಗಕ್ಕೆ ಬರಲು ಒಪ್ಪಿದಾಗ ಅರ್ಜುನ ಸಹಿತರಾಗಿ ಬಬ್ರುವಾಹನ, ಮಯೂರಧ್ವಜ, ಪ್ರದ್ಯುಮ್ನ, ಹಂಸಧ್ವಜರಿಗೆ ಮಹದಾನಂದವಾಯಿತು. ಶ್ರೀಕೃಷ್ಣನು ಬಕದಾಲ್ಭ್ಯರನ್ನು ಬರಸೆಳೆದು ಬಿಗಿದಪ್ಪಿದನು.

ಬಕದಾಲ್ಭ್ಯರು ಈ ತನಕ ಹಾತೊರೆಯುತ್ತಿದ್ದ ಸುಖ ದೊರೆತಿದೆ. ವಟಪತ್ರಶಾಯಿಯಾಗಿದ್ದು ಕಾಲಬೆರಳು ಚೀಪುತ್ತಾ, ಕಡವಾಯಿಯಲ್ಲಿ ಜೊಲ್ಲು ಸುರಿಸುತ್ತಾ, ಕಂಗಳಲ್ಲಿ ಮನಮೋಹಕ ಕಾಂತಿ ಸೂಸುತ್ತಾ ಮನ ಸೆಳೆಯುತ್ತಿದ್ದ ಆ ಮಂದಸ್ಮಿತ ಮಗುವನ್ನು ಒಮ್ಮೆ ಮುಟ್ಟಲು, ಮುಟ್ಟಿ ಹಿಡಿಯಲು, ಹಿಡಿದೆತ್ತಿ ಮುದ್ದಾಡಲು ಪಟ್ಟ ಹರಸಾಹಸ ಏನು ಕಡಿಮೆಯೆ? ತನ್ನ ಪೂರ್ಣ ಜ್ಞಾನ, ಶಕ್ತಿ ವಿನಿಯೋಗಿಸಿದರೂ ಕೈಗೂಡದೆ ಉಳಿದು ಹೋಗಿದ್ದ ಮನದಾಸೆ ಇಂದು ತಾನು ಶ್ರಮಿಸದೆ ನಿರಾಯಾಸವಾಗಿ ತಾನಿದ್ದಲ್ಲಿಗೆ ಬಂದು ಒದಗಿದಾಗ ಆ ಹಿತಾನುಭವವನ್ನು ವರ್ಣಿಸಿ ವಿವರಿಸಲಾದೀತೆ?

“ಕೃಷ್ಣಾ! ನನಗೆ ಈ ಜಗದ ಚರಾಚರ ವಸ್ತುಗಳ್ಯಾವುದೂ ಬೇಡ. ನಾನು ಬಯಸಿದ್ದು ಒಂದನ್ನು ಮಾತ್ರ. ನನಗೆ ಮನೆ, ಮಠ, ಮಡದಿ, ಮಕ್ಕಳು, ಸಂಸಾರ, ಸುಖ ಭೋಗಗಳೇನೂ ಬೇಡ. ಅಂತಹ ಆಸೆಯೂ ನನಗೆ ಆಗಲೇ ಇಲ್ಲ. ನನಗೆ ವಾಸಮಾಡಲು ಬೇಕೆಂದು ನಾನು ಬಯಸಿದ್ದು ಶ್ರೀಹರಿಯೆಂಬ ಮನೆಯನ್ನು. ಇನ್ನು ಆ ಮನೆಯಲ್ಲಿ ನನಗೆ ಮಡದಿಯಾಗಿ ಬಯಸಿದ್ದು ಅನುಕೂಲೆಯಾದ ಮುಕ್ತಿಕಾಂತೆಯನ್ನು. ಅಂತಹ ಪರಮೋತ್ಕೃಷ್ಟ ಮನೆಯಲ್ಲಿ ಮುಕ್ತಿಕಾಂತೆ ಅಂದರೆ ನನ್ನ ಸಾಧನೆಗೆ ಸಹಕಾರಿಣಿಯಾಗಿ, ಸಹಧರ್ಮಿಣಿಯಾಗಿ, ನನ್ನ ಮನದಾಸೆ ಪೂರೈಸಿ ನಾನು ಪಡೆಯ ಬಯಸಿದ್ದ ಮುಕ್ತಿಯೇ ಎನಗೆ ಕಾಂತೆ. ನಾನು ಬಯಸಿದ ಮನೆ ಮತ್ತು ಮಡದಿಯಿಂದ ನನಗೇನು ಸಿಗುವುದೋ ಅದು ನನ್ನ ಸಂಸಾರ. ಇದರಿಂದ ಮಾತ್ರ ಸುಖಭೋಗಾದಿಗಳು ಪ್ರಾಪ್ತವಾಗಲು ಸಾಧ್ಯ ಹೊರತು ಅನ್ಯ ಯಾವುದರಿಂದಲೂ ನನ್ನ ಬಯಕೆ ಈಡೇರದು. ಈಗ ನನ್ನ ಮನೆ ಕಾಣಿಸಿದೆ. ಬಯಸಿದ ಮನೆಯನ್ನು ಪ್ರವೇಶಿಸುತ್ತಿದ್ದೇನೆ. ಇಂದಿನ ತನಕ ನಾನು ಸಹಿಸಿದ ಕಾಯುವಿಕೆ, ಸೈರಣೆ, ಇಟ್ಟಂತಹ ವಿಶ್ವಾಸ, ಪಟ್ಟಂತಹ ಶ್ರಮ ಎಲ್ಲವೂ ಸಾಕಾರಗೊಂಡಿದೆ. ನನಗಾಗುತ್ತಿರುವ ಈ ಅನುಭವವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಲಾರೆ. ಧನ್ಯನಾದೆ ದೇವಾ, ಕೃತಾರ್ಥನಾದೆ. ನೀನು ಭಕ್ತವತ್ಸಲನೂ ಹೌದು, ಭಕ್ತರಾಧೀನನೂ ಹೌದು. ವಿಶ್ವಾಸೋ ಫಲದಾಯಕಃ ನನ್ನ ಧೃಡ ವಿಶ್ವಾಸವನ್ನು ಕೊನೆಗೂ ನಿಜವಾಗಿಸಿರುವೆ. ನಿನಗೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನಿನ್ನ ಕರುಣೆ ಸದಾ ನನಗೆ ಋಣವಾಗಿ ಉಳಿಯುತ್ತದೆ. ನನ್ನ ಹೆಬ್ಬಯಕೆ ಈಡೇರಿಸು ದೇವಾ. ನೀನಿಲ್ಲದೆ ನನಗಿನ್ನು ಬದುಕಲಾಗದು. ನನ್ನ ಕೈ ಬಿಡದಿರು ಪರಮಾತ್ಮಾ….” ಎಂದು ಬಹಳಷ್ಟು ಭಕ್ತಿ ಪಾರಮ್ಯದಿಂದ ಮಾರ್ಮಿಕವಾಗಿ ಬಕದಾಲ್ಭ್ಯರು ಬೇಡಿಕೊಳ್ಳುತ್ತಾ ಬಿಗಿಯಾಗಿ ಅಪ್ಪಿಕೊಂಡರು.

ಕೃಷ್ಣ ಪರಮಾತ್ಮನೂ ತನ್ನ ಭಕ್ತನ ಆಸೆ ಈಡೇರಲಿ ಎಂದು ಬಿಗಿದಪ್ಪಿ ತಾಯಿ ಮಗುವನ್ನು ಮುದ್ದಿಸುವಂತೆ ತುಸು ಹೊತ್ತು ಮುದ್ದಾಡಿದನು. ಎಂತಹ ದೃಶ್ಯವದು. ಎಷ್ಟು ವಿವರಿಸಿದರೂ ಬಕದಾಲ್ಭ್ಯರ ಕಾಯುವಿಕೆ, ಸುದೀರ್ಘ ಸಾಧನೆಯ ಫಲವಾಗಿ ದೊರೆತ ಈ ಕ್ಷಣ ವರ್ಣಿಸಲಾದೀತೆ? ಕೃಷ್ಣನ ಅಪ್ಪುಗೆಯಲ್ಲಿ ಇದ್ದು ಅವರು ಹೇಳತೊಡಗಿದರು. “ಮರ್ಕಟ ಕಿಶೋರ ನ್ಯಾಯ” ದಂತೆ ನಾನು ನಿನ್ನನ್ನು ಅಂದರೆ ತಾಯಿ ಕೋತಿಯನ್ನು ಮರಿ ಕೋತಿ ಬಿಗಿದಪ್ಪಿ ಹಿಡಿದಿರುವಂತೆ ಅಪ್ಪಿಕೊಂಡಿರುತ್ತೇನೆ. ನೀನು ಎಷ್ಟು ಎತ್ತರದಿಂದ ಬೇಕಾದರು ಹಾರು, ಎಲ್ಲಿಗೆ ಬೇಕಾದರೂ ಕರೆದೊಯ್ಯು, ಏನು ಬೇಕಾದರೂ ಮಾಡು. ಆದರೆ ನನಗೆ ನನ್ನ ತಾಯಿಯಾದ ನಿನ್ನ ಮೇಲೆ ಪೂರ್ಣ ವಿಶ್ವಾಸವಿದೆ. ನೀನೂ ನನ್ನ ಮೇಲೆ ಅದೇ ಪ್ರೀತಿ ವಿಶ್ವಾಸ ತೋರಿಸಿ ನನಗೆ ಅಪ್ಪುಗೆಯ ಅವಕಾಶ ನೀಡಿರುವೆಯಲ್ಲಾ ಪರಮಾತ್ಮಾ” ಎಂದು ಮತ್ತೆ ಮತ್ತೆ ಎಳೆ ಮಗುವಿನಂತಾದರು.

ಶ್ರೀಕೃಷ್ಣ ಪರಮಾತ್ಮನೂ ಅಷ್ಟೇ ಪ್ರೀತಿಯಿಂದ ಬಕದಾಲ್ಭ್ಯರನ್ನು ಮನಸಾರೆ ಸೇವಿಸಿ ತನ್ಮಯತೆಯಿಂದ ಹೊರತಂದು ಗೌರವದಿಂದ ನಡೆಸಿಕೊಂಡನು. ಜೊತೆಯಾಗಿ ಸಾಗರ ಮಧ್ಯದಿಂದ ಯಾಗಾಶ್ವಗಳ ಜೊತೆಯಲ್ಲಿ ಹೋದ ಆರು ಜನ ಈಗ ಏಳು ಮಂದಿಯಾಗಿ ಬಕದಾಲ್ಭ್ಯರ ಜೊತೆ ಸಮುದ್ರ ದಡಕ್ಕೆ ಬಂದರು. ಪಾಂಡವರ ಬೃಹತ್ ಸೇನೆ ಕಾತರದಿಂದ ಕೃಷ್ಣಾರ್ಜುನರಿಗಾಗಿ ಕಾಯುತ್ತಿತ್ತು. ಅಶ್ವಮೇಧದ ಕುದುರೆಗಳ ಜೊತೆ ಹಿಂತಿರುಗಿ ಬಂದುದನ್ನು ನೋಡಿ ಎಲ್ಲರೂ ಸಂತೋಷಗೊಂಡರು.

ಎಲ್ಲರಿಗೂ ಶ್ರೀಕೃಷ್ಣ ಪರಮಾತ್ಮ ಬಕದಾಲ್ಭ್ಯರ ಜೊತೆ ಆಶೀರ್ವದಿಸಿ ಹರಸಿದರು. ಬಳಿಕ ಅತ್ಯುತ್ತಮವಾದ ಶಿಬಿಕೆ (ಪಲ್ಲಕಿ) ಸಿದ್ಧಪಡಿಸಿ ಬಕದಾಲ್ಭ್ಯರನ್ನು ಅದರಲ್ಲಿ ಕುಳ್ಳಿರಿಸಿದನು. ರಕ್ಷಣೆ ಹಾಗು ಪರಿಚಾರಕರಾಗಿ ಮಿತ ಸೈನ್ಯವನ್ನೂ ಜೊತೆಯಾಗಿಸಿ ಹಸ್ತಿನಾವತಿಗೆ ಕಳುಹಿಸಿಕೊಟ್ಟನು. ಅಲ್ಲಿ ಧರ್ಮರಾಯನಿಗೆ ಆಶೀರ್ವಾದವಿತ್ತು ಯಾಗ ಸಂಪನ್ನತೆಗೆ ತಮ್ಮ ಪೂರ್ಣ ಸಹಕಾರ ಬೇಕೆಂದು ದೇವನಾದರೂ ಶ್ರೀಕೃಷ್ಣ ಪರಮಾತ್ಮ ನಿವೇದಿಸಿಕೊಂಡನು. ಬಕದಾಲ್ಭ್ಯರ ಶಿಬಿಕೆ ಸರ್ವ ರಕ್ಷಣೆಯೊಂದಿಗೆ ಹಸ್ತಿನೆಯತ್ತ ತೆರಳಿತು. ಅಶ್ವಮೇಧದ ಕುದುರೆಗಳು ಮತ್ತೆ ಮುಂದುವರಿದವು. ಪಾಂಡವ ಸೇನೆ ಶ್ರೀಕೃಷ್ಣ ಸಹಿತವಾಗಿ ಬೆಂಬಲಿಸಿ ಸಾಗತೊಡಗಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page