
ಬೆಂಗಳೂರು: ನಗರ ಮತ್ತು ಪಟ್ಟಣಗಳ ಖಾಸಗಿ ಬಡಾವಣೆಗಳಲ್ಲಿರುವ ಹದಗೆಟ್ಟ ರಸ್ತೆಗಳ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದ್ದು, ಆ ಖಾಸಗಿ ರಸ್ತೆಗಳನ್ನು ಇನ್ನು ಮುಂದೆ ಸಾರ್ವಜನಿಕ ರಸ್ತೆ ಎಂದು ಪರಿಗಣಿಸುವದಕ್ಕೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ 2026 ಹಾಗೂ ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026ಕ್ಕೆ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಅನುಮೋದನೆ ದೊರೆತಿದೆ.
ಮಸೂದೆಯ ಉದ್ದೇಶವೇನು?
ಖಾಸಗಿ ಬಡಾವಣೆಗಳ ರಸ್ತೆಗಳು ಹಾಗೂ ಚರಂಡಿಗಳು ಹದಗೆಟ್ಟು ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸಮಸ್ಯೆಯಾಗಿದ್ದರೆ, ನಗರಸಭೆ ಅಥವಾ ಪಾಲಿಕೆ ಅಧಿಕಾರಿಗಳು ಅವುಗಳನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಬಹುದು. ಬಳಿಕ ರಸ್ತೆಗಳನ್ನು ಸಾರ್ವಜನಿಕ ಬಳಕೆಗೆ ಅಭಿವೃದ್ಧಿಪಡಿಸಲು ಅವಕಾಶ ಸಿಗಲಿದೆ.
ಹೇಗೆ ಸಾರ್ವಜನಿಕ ರಸ್ತೆ ಆಗಲಿದೆ?
ರಸ್ತೆಯ ಸ್ಥಿತಿ ಕಳಪೆಯಾಗಿದ್ದರೆ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬಹುದು. ಮತ್ತೊಂದೆಡೆ, ಸಂಬಂಧಪಟ್ಟ ಸೈಟ್ ಮಾಲೀಕರು ಒಟ್ಟಾಗಿ ರಸ್ತೆ ಸಾರ್ವಜನಿಕ ರಸ್ತೆ ಎಂದು ಘೋಷಿಸುವಂತೆ ನಗರಸಭೆ ಅಥವಾ ಪಾಲಿಕೆಗೆ ಮನವಿ ಸಲ್ಲಿಸಬಹುದು.
ಮಾಲೀಕರಿಗೆ ಪರಿಹಾರವಿಲ್ಲ:
ಖಾಸಗಿ ರಸ್ತೆಯನ್ನು ಒಮ್ಮೆ ಸಾರ್ವಜನಿಕ ರಸ್ತೆ ಎಂದು ಘೋಷಿಸಿದ ಬಳಿಕ ಅದರ ಮೂಲ ಭೂಮಾಲೀಕರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಅಲ್ಲದೆ, ಭೂಮಿಗೆ ಬದಲಾಗಿ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ಅಥವಾ ಟಿಡಿಆರ್ ಪಡೆಯುವ ಅವಕಾಶವೂ ಇರುವುದಿಲ್ಲ.
ಬಿಜೆಪಿ-ಜೆಡಿಎಸ್ ವಿರೋಧ
ಮಸೂದೆಗೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಯಾವುದೇ ಪರಿಹಾರ ನೀಡದೆ ಖಾಸಗಿ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯುವುದು ಮಾಲೀಕರ ಹಕ್ಕುಗಳಿಗೆ ಧಕ್ಕೆ ಎಂದು ಆರೋಪಿಸಿವೆ. ಅಧಿಕಾರಿಗಳು ಈ ನಿಯಮವನ್ನು ದುರ್ಬಳಕೆ ಮಾಡುವ ಸಾಧ್ಯತೆಯ ಬಗ್ಗೆಯೂ ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.



















































































