ಭಾಗ – 706
ಭರತೇಶ ಶೆಟ್ಟಿ,ಎಕ್ಕಾರು

ಅತಿ ದುಃಖಕ್ಕೊಳಗಾಗಿ ತೀರಾ ಖಿನ್ನತೆಗೊಳಗಾದ ಪಾಂಡವರನ್ನು ಸಂತೈಸಿ ಮಾತೃವಿಯೋಗ, ಬಂಧುವಿಯೋಗದ ದುಃಖವನ್ನು ಶಮನಗೊಳಿಸುವ ಬೋಧನೆ ಉಪದೇಶಗಳನ್ನು ಮಾಡಿ ಹೊರಟು ಹೋದರು.
ಬಳಿಕ ಧರ್ಮರಾಯ ಒಡ ಹುಟ್ಟಿದ ಸೋದರರು, ದ್ರೌಪದಿಯರಾದಿ ರಾಣಿಯರು, ಧೃತರಾಷ್ಟ್ರ ಪುತ್ರ ಯುಯುತ್ಸು, ಹಾಗು ಪ್ರಜಾ ಪರಿವಾರದೊಡನೆ ಗಂಗಾತೀರಕ್ಕೆ ಬಂದನು. ತಪೋವನದಲ್ಲಿ ತಮ್ಮ ವಂಶದ ಹಿರಿಯರಾದ ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿದೇವಿಯ ಒಡನಾಟದಲ್ಲಿದ್ದ ತಪಸ್ವಿಗಳನ್ನು ಸಂದರ್ಶಿಸಿದರು. ಬಳಿಕ ಅವರ ನಿರ್ದೇಶನದಂತೆ ಗಂಗಾನದಿಯಲ್ಲಿ ಸ್ನಾನಾದಿ ಕರ್ಮಗಳನ್ನು ಪೂರೈಸಿ ಶುಚಿರ್ಭೂತರಾಗಿ ಬಂದರು. ಯುಯುತ್ಸುವನ್ನು ಮುಂದೆ ಮಾಡಿಕೊಂಡು ಮಹಾತ್ಮನಾದ ಧೃತರಾಷ್ಟ್ರನಿಗೆ ತರ್ಪಣವಿತ್ತರು. ಪಾಂಡವರು ವಿಧಿಪೂರ್ವಕವಾಗಿ ಮಾತೆಯರಾದ ಗಾಂಧಾರಿಗೂ ಕುಂತಿದೇವಿಗೂ ತರ್ಪಣವಿತ್ತರು. ನಂತರ ಮೃತ ಹಿರಿಯರ ಹೆಸರಿನಲ್ಲಿ ಸದ್ಗತಿಗಾಗಿ ವೈದಿಕ ಪ್ರಕ್ರಿಯೆಗಳನ್ನು ನೆರವೇರಿಸಿ ಯಥೇಚ್ಚ ದಾನ ಧರ್ಮಾದಿ ಕಾರ್ಯಗಳನ್ನು ನೆರವೇರಿಸಿ ಅನ್ನಸಂತರ್ಪಣೆಯಾದಿ ಕ್ರಮಗಳನ್ನು ಜರುಗಿಸಿದನು. ಹೀಗೆ ಇಹಯಾತ್ರೆ ಮುಗಿಸಿದ ಹಿರಿಯರ ಅಪರಕ್ರಿಯೆಗಳೆಲ್ಲವನ್ನು ಪೂರೈಸಿ ಅರಮನೆಗೆ ಹಿಂದಿರುಗಿದರು.
ದಿನಗಳು ಕಳೆಯುತ್ತಿವೆ. ಧರ್ಮರಾಯನ ಆಡಳಿತದಲ್ಲಿ ಹಸ್ತಿನೆ ಪ್ರಶಾಂತವಾಗಿದೆ. ಮಗು ಪರೀಕ್ಷಿತ ಬೆಳೆಯುತ್ತಿದ್ದಾನೆ. ಅಕ್ಷರಾಭ್ಯಾಸ, ಶಾಸ್ತ್ರ, ಶಸ್ತ್ರ ವಿದ್ಯೆಗಳೆಲ್ಲವನ್ನು ಕಲಿತು ಪ್ರೌಢನಾಗುತ್ತಿದ್ದಾನೆ. ಚಂದ್ರವಂಶದ ವಂಶಾಂಕುರವಾಗಿ ಉಳಿದಿರುವ ಪರೀಕ್ಷಿತನಿಗೆ ಅಜ್ಜ ಧರ್ಮರಾಯ ಧರ್ಮಬೋಧೆಯನ್ನು ಧಾರೆ ಎರೆಯುತ್ತಿದ್ದರೆ, ಭೀಮಸೇನನಿಂದ ಗದಾಯುದ್ಧ, ಮಲ್ಲಯುದ್ಧ, ಅರ್ಜುನನಿಂದ ಧನುರ್ವಿದ್ಯೆ, ನಕುಲ ಸಹದೇವರಿಂದ ಅವರು ಅರಿತಿರುವ ಕೌಶಲ್ಯಗಳನ್ನು ಹಂತ ಹಂತವಾಗಿ ಬೋಧಿಸುತ್ತಿದ್ದಾರೆ ಕರಗತಗೊಳಿಸುತ್ತಾ ಪ್ರಬುದ್ಧನಾಗತೊಡಗಿದ್ದಾನೆ. ಹರೆಯದ ಪ್ರಾಯಕ್ಕೆ ಕಾಲಿರಿಸಿದ ಪರೀಕ್ಷಿತ ಗುಣ, ಸಂಸ್ಕಾರ, ಜ್ಞಾನ, ಶೌರ್ಯ, ಪರಾಕ್ರಮ, ಸಂವೇದನಾ ಶೀಲಗುಣ, ಪ್ರಜಾನುರಾಗ ಹೀಗೆ ಸಕಲ ವಿಭಾಗದಲ್ಲೂ ಪ್ರವೀಣನೂ ಪ್ರತಾಪಿಯೂ ಆಗಿ ಹಿರಿಯರ ಒಲವಿನ ಕರಕಮಲ ಸಂಜಾತನಾಗಿ ವಿಕಸಿಸುತ್ತಿದ್ದಾನೆ. ರಾಜಕಾರ್ಯದಲ್ಲಿ ಅಜ್ಜ ಧರ್ಮರಾಯನಿಗೆ ನೆರವಾಗುತ್ತಾ ಅನುಭವ ಪಡೆಯುತ್ತಿದ್ದಾನೆ. ಹೀಗೆ ಎಲ್ಲವೂ ಸಾಗುತ್ತಾ ವರ್ಷ ಮೂವತ್ತೈದು ಆಗಿ ಹೋಯಿತು. ಮಹಾಭಾರತ ಯುದ್ಧ ಕಳೆದು ಅಷ್ಟೇ ಸಂವತ್ಸರಗಳು ಉರುಳಿ ಹೋಗಿವೆ.
ಹಸ್ತಿನೆಯ ಕಥೆ ಹೀಗಾದರೆ ಶ್ರೀಕೃಷ್ಣ ಬಲರಾಮರ ದ್ವಾರಕಾ ಪಟ್ಟಣದ ಸ್ಥಿತಿ ತುಸು ಭಿನ್ನವಾಗಿದೆ. ಈ ಎರಡು ಸಾಮ್ರಾಜ್ಯಗಳೊಳಗೆ ಮಹಾಭಾರತ ಯುದ್ಧಾ ನಂತರ ವ್ಯತ್ಯಾಸವೇನೆಂದರೆ ಹಸ್ತಿನಾವತಿಯ ಚಂದ್ರವಂಶದ ಎಲ್ಲಾ ಘಟಾನುಘಟಿ ವೀರಾದಿವೀರರು ಅಳಿದು ಪಾಂಡವರೈವರು ಮಾತ್ರ ಉಳಿದಿದ್ದಾರೆ. ಆದರೆ ದ್ವಾರಕೆಯ ಯಾದವ ಸಾಮ್ರಾಜ್ಯದ ಪ್ರಮುಖ ವೀರರು ಹೆಚ್ಚಿನವರೆಲ್ಲ ಮಹಾಭಾರತ ಯುದ್ಧದಲ್ಲಿ ಭಾಗಿಯಾಗಿದ್ದರೂ ಬದುಕುಳಿದಿದ್ದಾರೆ. ಸಾತ್ಯಕಿ, ಕೃತವರ್ಮ, ಸಾಂಬ, ಅನಿರುದ್ಧ, ಹೀಗೆ ಯಾದವ ವೃಷ್ಣಿ ವೀರರೆಲ್ಲರೂ ಇದ್ದಾರೆ. ಈ ಕಾರಣದಿಂದ ಯಾದವ ಸಾಮ್ರಾಜ್ಯ ಪ್ರಬಲವಾಗಿ ಉಳಿದಿದೆ. ಯಾದವರ ಕೀರ್ತಿ, ಉತ್ಕರ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇತ್ತು. ಸ್ವಯಂ ಶ್ರೀಕೃಷ್ಣ ಉಪಸ್ಥಿತನಿರುವ ಪುರವದು. ಎಲ್ಲರೂ ಪ್ರಮುಖರಾಗಿ ಯಾದವ ಹಿರಿತಲೆಗಳೆಲ್ಲರು ಪ್ರತಿಷ್ಠಿತರು, ತಿಳಿದವರಾಗಿದ್ದಾರೆ. ಎಲ್ಲರೂ ಹೇಳುವವರೇ, ಆದೇಶ ಮಾಡುವವರೇ ಆಗಿರುವಾಗ ಕೇಳಿ ಅನುವರ್ತಿಗಳಾಗಿ ನಡೆದುಕೊಳ್ಳುವವರೂ ಬೇಕಲ್ಲವೇ? ಜೊತೆಗೆ ಶ್ರೀಕೃಷ್ಣನ ಮಕ್ಕಳೂ ಬಹುಮಂದಿ ಇದ್ದಾರೆ. ಎಲ್ಲರೂ ರಾಜ ಕುಮಾರರು! ಯೌವನದ ಬಿಸಿರಕ್ತದ ತರುಣರು. ಹೀಗೆ ತುಂಬಿ ತುಳುಕುತ್ತಿದ್ದ ಯಾದವ ಸಾಮ್ರಾಜ್ಯ ಸಂಪದ್ಭರಿತವಾಗಿದೆ.ಶತ್ರು ಭಯವಿಲ್ಲ, ಯುದ್ಧಗಳಾಗುತ್ತಿಲ್ಲ. ಜೀವನ ಭದ್ರತೆಯೂ ಇದೆ. ಯಾವ ವಿಧದ ಚಿಂತೆಯೂ ಇಲ್ಲ. ಬಲರಾಮ ಕೃಷ್ಣರ ಹಿರಿತನದಿಂದ ಈ ವಂಶದ ಕೀರ್ತಿ ಪ್ರತಿಷ್ಟೆಯೂ ವರ್ಧಿಸುತ್ತಿದೆ. ಇಂತಹ ಔನ್ನತ್ಯ ಯಾದವರ ಮನದಲ್ಲಿ ನಮಗೆ ಸರಿ ಮಿಗಿಲಾದವರು ಯಾರೂ ಇಲ್ಲ ಎಂಬಂತಹ ಅಹಂ ಭಾವದ ಸೃಷ್ಟಿಗೆ ಕಾರಣವಾಗಿದೆ.
ಹೀಗೆ ಸಮೃದ್ಧವಾಗಿರುವ ಯಾದವ ಸಾಮ್ರಾಜ್ಯವನ್ನೊಮ್ಮೆ ನೋಡಿಕೊಂಡು, ಶ್ರೀಕೃಷ್ಣನನ್ನು ಮಾತನಾಡಿಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಬೇಕು ಎಂದು ನಾರದ ಮಹರ್ಷಿಗಳು ಕಣ್ವರನ್ನು, ವಿಶ್ವಾಮಿತ್ರರನ್ನು ಜೊತೆಗೆ ಬಹು ಮಂದಿ ಮಹರ್ಷಿಗಳನ್ನು ಕೂಡಿಕೊಂಡು ದ್ವಾರಕೆಗೆ ಬಂದರು. ಸಮುದ್ರ ತೀರಕ್ಕೆ ಬಂದು ದ್ವಾರಕಾ ಪಟ್ಟಣದ ಪುರ ಪ್ರವೇಶ ಮಾಡುವ ಹೊತ್ತಿಗೆ ಅಲ್ಲಿಯೆ ಇದ್ದ ಬಹುಮಂದಿ ಯಾದವ ವೀರರು ಜೊತೆಯಾಗಿ ಕಲೆತು ಮನೋರಂಜನೆ, ವಿನೋದ ಗೋಷ್ಠಿಯಾದಿಗಳಲ್ಲಿ ನಿರತರಾಗಿ ಕಾಲಕ್ಷೇಪದಲ್ಲಿ ತೊಡಗಿದ್ದರು.
ಮುಂದುವರಿಯುವುದು…

























































































