
ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ವಿವಿಧ ಬ್ರ್ಯಾಂಡ್ಗಳ 543 ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಕಡಿತಗೊಳಿಸಿದೆ. ಪರಿಷ್ಕೃತ ದರಗಳು ನವೆಂಬರ್ 9ರಿಂದ ಜಾರಿಗೆ ಬರಲಿವೆ.
ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ತಗ್ಗಿಸಿ, ಜೀವ ಉಳಿಸುವ ಔಷಧಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಔಷಧಗಳ ಮಾರಾಟ ಸರಪಳಿಯಲ್ಲಿನ ವ್ಯಾಪಾರ ಮಾರ್ಜಿನ್ಗಳನ್ನು ನಿಯಂತ್ರಿಸುವ ಮೂಲಕ ಬೆಲೆ ಇಳಿಕೆಗೆ ಮುಂದಾಗಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆಯ ಪ್ರಕಾರ, 2026ರ ಅಕ್ಟೋಬರ್ 27ರವರೆಗೆ ಔಷಧ ಕಂಪನಿಗಳು ಸಲ್ಲಿಸಿದ ಮಾಹಿತಿಯನ್ನು ಪರಿಷ್ಕೃತ ಬೆಲೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಉಳಿದ ಔಷಧಗಳ ದರಗಳನ್ನೂ ಕಂಪನಿಗಳಿಂದ ಮಾಹಿತಿ ಬಂದಂತೆ ನವೀಕರಿಸಲಾಗುತ್ತದೆ.
ಕಳೆದ ಅಕ್ಟೋಬರ್ 17ರಂದು NPPA, ನಿಗದಿತ ಪಟ್ಟಿಗೆ ಸೇರದ 137 ಕ್ಯಾನ್ಸರ್ ಔಷಧಗಳ ವ್ಯಾಪಾರ ಮಾರ್ಜಿನ್ಗಳನ್ನು ತರ್ಕಬದ್ಧಗೊಳಿಸುವ ಕ್ರಮ ಪ್ರಕಟಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 543 ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸಲಾಗಿದೆ.
ಈ ಪಟ್ಟಿಯಲ್ಲಿ ಇಮ್ಯುನೊಥೆರಪಿ ಔಷಧಗಳು, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಡೆನೊಸುಮಾಬ್, ನ್ಯೂಟ್ರೋಪೀನಿಯಾ ಅಪಾಯ ಕಡಿಮೆ ಮಾಡುವ ಪೆಗ್ಫಿಲ್ಗ್ರಾಸ್ಟಿಮ್ ಹಾಗೂ ಕೊಲೊನ್, ಅಂಡಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಬೆವಾಸಿಜುಮಾಬ್ನಂತಹ ಔಷಧಗಳು ಸೇರಿವೆ.
543 ಬ್ರ್ಯಾಂಡ್ಗಳ ಪರಿಷ್ಕೃತ ದರಗಳ ಪಟ್ಟಿಯನ್ನು NPPAಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಬೆಲೆ ಇಳಿಕೆಯಿಂದ ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ವೆಚ್ಚದ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ. ನಿರ್ದಿಷ್ಟ ಔಷಧದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದನ್ನು ತಿಳಿಯಲು ಅಧಿಕೃತ ಪಟ್ಟಿಯನ್ನು ಪರಿಶೀಲಿಸಬಹುದು.
























