
ರಾಮನಗರ: ಸಚಿವ ಎಚ್.ಸಿ. ಬಾಲಕೃಷ್ಣ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ರಾಜಕೀಯವಾಗಿ ಬೆಳೆಸುವ ಉದ್ದೇಶದಿಂದ ಸಹೋದರನ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಪಂಚಾಯಿತಿ ಸದಸ್ಯರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ನೈಸ್ ಹಾಗೂ ಕೆಪಿಎಸ್‌ಸಿ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಪ್ರಜ್ವಲ್ ಪ್ರಕರಣಕ್ಕೂ ನೈಸ್-ಕೆಪಿಎಸ್‌ಸಿ ವಿಚಾರಕ್ಕೂ ಏನು ಸಂಬಂಧ. ಪ್ರಜ್ವಲ್ ವಿಚಾರವನ್ನು ಪದೇಪದೇ ಪ್ರಸ್ತಾಪಿಸುವ ಮೂಲಕವೇ ಅವರನ್ನು ಜೈಲಿಗೆ ಕಳುಹಿಸಲಾಯಿತು. ಪ್ರಜ್ವಲ್ ಜೈಲಿನಲ್ಲೇ ಇರಬೇಕು ಹಾಗೂ ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪಿಸಬೇಕು ಎಂಬುದು ಕುಮಾರಸ್ವಾಮಿ ಅವರ ಉದ್ದೇಶ ಎಂದು ಆರೋಪಿಸಿದರು.
ಪ್ರಜ್ವಲ್ ಬಳಿ ಮೊಬೈಲ್ ಹೇಗೆ ಬಂತು ಎಂಬ ಅನುಮಾನವಿದ್ದರೆ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದು ಬಾಲಕೃಷ್ಣ ಸವಾಲು ಹಾಕಿದರು.
ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಎಚ್‌ಡಿಕೆ ವ್ಯಂಗ್ಯವಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಪ್ರಕಾರ ಪ್ರಪಂಚದಲ್ಲಿ ಅವರೊಬ್ಬರೇ ಮೇಧಾವಿ, ಉಳಿದವರೆಲ್ಲ ದಡ್ಡರು ಎಂಬ ಮನಸ್ಥಿತಿ ಇದೆ ಎಂದು ಟೀಕಿಸಿದರು.






























































































































