
ಬೆಂಗಳೂರು: ಶಕ್ತಿಯೋಜನೆಗೆ ಶ್ರಮಿಸುತ್ತಿರೋ ಬಸ್‌ಗಳಿಗೆ ಆಯುಧ ಪೂಜೆಗೆ ತಲಾ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದ್ದು ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಯುಧ ಪೂಜೆ ಸ್ವಚ್ಛತೆ, ಅಲಂಕಾರಕ್ಕೆ ಕೆಎಸ್‌ಆರ್‌ಟಿಸಿ ಕೇವಲ ತಲಾ 100 ರೂ. ಬಿಡುಗಡೆ ಮಾಡಿದೆ. ಕಳೆದ ವರ್ಷದಂತೆ ಈ ಬಾರಿಯೂ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಸಾರಿಗೆ ನಿಗಮ 1 ಬಸ್‌ಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ ನೀಡಿದೆ. ಪ್ರತಿಯೊಂದು ಬಸ್ಸಿನ ಸ್ವಚ್ಛತೆ ಅಲಂಕಾರ ಮತ್ತು ನಿರ್ವಹಣೆಗೆ ಕಡಿಮೆ ಹಣ ಬಿಡುಗಡೆ ಮಾಡಿರುವುದಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸ್‌ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿ ಆಸೆಗೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರೆಚಿದೆ. ಬಿಡುಗಡೆ ಮಾಡಿರುವ 100 ರೂ. ನಲ್ಲಿ ಒಂದು ಬಸ್‌ಗೆ ಪೂಜೆ ಮಾಡೋಕೆ ಆಗುತ್ತಾ? ಒಂದು ಮಾರು ಸೇವಂತಿಗೆ ಹೂವಿಗೆ 70 ರೂ. ಇರುವಾಗ ಹಬ್ಬದ ದಿನ 100 ರೂ. ನಲ್ಲಿ ಬಸ್‌ಗೆ ಹೇಗೆ ಪೂಜೆ ಮಾಡೋದು? ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.













