ಖಾಸಗಿ ವಿವಿಗಳ 5 ವರ್ಷಗಳ ಆಡಿಟ್ ವರದಿ ಸಲ್ಲಿಸಲು ಸುಪ್ರೀಂ ಆದೇಶ

ನವದೆಹಲಿ: ಖಾಸಗಿ ವಿಶ್ವವಿದ್ಯಾಲಯಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದೇಶದ ಎಲ್ಲ ಖಾಸಗಿ ವಿವಿಗಳ ಕಳೆದ ಐದು ವರ್ಷಗಳ ಆಡಿಟ್ ವರದಿ, ವಿದ್ಯಾರ್ಥಿಗಳಿಂದ ಪಡೆದ ಶುಲ್ಕ ಹಾಗೂ ಹೆಚ್ಚುವರಿ ಹಣದ ಬಳಕೆಯ ವಿವರಗಳನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ಆದೇಶಿಸಿದೆ.
ಶಿಕ್ಷಣವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸೇವೆಯಾಗಿದ್ದು, ಸಂಸ್ಥೆಯ ಹಣವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸೂಕ್ತ ವೇತನ ನೀಡುವುದಕ್ಕೆ ಆದ್ಯತೆ ಇರಬೇಕು ಎಂದು ಸೂಚಿಸಿದೆ.
ಆಡಳಿತ ಮಂಡಳಿಯ ನಿರ್ದೇಶಕರಿಗೆ ಅತಿಯಾದ ವೇತನ ನೀಡುವುದು, ಟ್ರಸ್ಟಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸುವುದು ಹಾಗೂ ಶೈಕ್ಷಣಿಕ ಕಾರ್ಯದಲ್ಲಿ ಭಾಗಿಯಾಗದವರಿಗೆ ಸಂಸ್ಥೆಯ ಹಣ ನೀಡುವುದನ್ನು ನ್ಯಾಯಪೀಠ ಪ್ರಶ್ನಿಸಿದೆ.
ಸರ್ಕಾರದಿಂದ ರಿಯಾಯಿತಿ ದರದಲ್ಲಿ ಪಡೆದ ಭೂಮಿ, ತೆರಿಗೆ ವಿನಾಯಿತಿ ಹಾಗೂ ಇತರ ವಿಶೇಷ ಸವಲತ್ತುಗಳ ಸಂಪೂರ್ಣ ಮಾಹಿತಿಯನ್ನೂ ವಿವಿಗಳು ಸಲ್ಲಿಸಬೇಕಿದೆ. ಪ್ರವೇಶ ಮತ್ತು ಕೋರ್ಸ್ ಅವಧಿಯಲ್ಲಿ ಅಭಿವೃದ್ಧಿ ನಿಧಿ ಅಥವಾ ಇತರ ಶುಲ್ಕಗಳ ಹೆಸರಿನಲ್ಲಿ ಪಡೆದ ಹೆಚ್ಚುವರಿ ಮೊತ್ತದ ವಿವರಗಳನ್ನೂ ನೀಡಬೇಕು.
ಜನವರಿ 2025ರಿಂದ ಬೋಧಕರಿಗೆ ಹಂಚಿಕೆಯಾದ ತರಗತಿಗಳು, ಅವರು ವಾಸ್ತವವಾಗಿ ನಡೆಸಿದ ತರಗತಿಗಳು ಹಾಗೂ ಶಿಕ್ಷಕರ ಕೊರತೆಯ ಸಂದರ್ಭದಲ್ಲಿ ಕೈಗೊಂಡ ಪರ್ಯಾಯ ವ್ಯವಸ್ಥೆಯ ಮಾಹಿತಿಯನ್ನೂ ಕೋರ್ಟ್ ಕೇಳಿದೆ.
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಖಾಸಗಿ ವಿವಿಗಳಿಂದ ಮಾಹಿತಿ ಸಂಗ್ರಹಿಸಿ ಆರು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19ಕ್ಕೆ ನಿಗದಿಪಡಿಸಲಾಗಿದೆ.
ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರ ದಾಖಲೆ ತಿದ್ದುಪಡಿ ಕುರಿತ ದೂರಿನ ವಿಚಾರಣೆಯಿಂದ ಆರಂಭವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ದೇಶದ ಖಾಸಗಿ ವಿಶ್ವವಿದ್ಯಾಲಯಗಳ ಹಣಕಾಸು ಮತ್ತು ಆಡಳಿತ ವ್ಯವಸ್ಥೆಯ ಪರಿಶೀಲನೆಗೆ ವಿಸ್ತರಿಸಿದೆ.
ಇದೇ ವೇಳೆ ರಾಷ್ಟ್ರೀಯ ವೈದ್ಯಕೀಯ ಆಯೋಗ, ದಂತ ಮಂಡಳಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ನರ್ಸಿಂಗ್ ಕೌನ್ಸಿಲ್ ಸೇರಿದಂತೆ ನಿಯಂತ್ರಣ ಸಂಸ್ಥೆಗಳಿಗೂ ಖಾಸಗಿ ಕಾಲೇಜುಗಳ ತಪಾಸಣೆ ಮತ್ತು ಪತ್ತೆಯಾದ ಲೋಪಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.































































































































