ಕೋಡಿಶ್ರೀ ಭವಿಷ್ಯಕ್ಕೆ ಉಡುಪಿಯ ಘಟನೆ ತಾಳೆ? ಭಾರೀ ಕಂಟಕದ ಮುನ್ಸೂಚನೆ

ಬೆಂಗಳೂರು: ‘ಕಟ್ಟೆ ಇಲ್ಲದ ಬಾವಿ ಹುಟ್ಟಿ, ಗಟ್ಟಿ ಭೂಮಿ ಬಟ್ಟಬಯಲಾಯ್ತು’ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಎರಡು ದಿನಗಳ ಹಿಂದೆ ನುಡಿದಿದ್ದ ಭವಿಷ್ಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಉಡುಪಿಯಲ್ಲಿ ನಡೆದ ಘಟನೆಗೂ ಕೋಡಿಶ್ರೀಗಳ ಭವಿಷ್ಯಕ್ಕೂ ತಾಳೆ ಹಾಕಲಾಗುತ್ತಿದೆ.
ಕಳೆದ ವಾರ ಉಡುಪಿಯ ವಿಟ್ಲಪಿಂಡಿ ಉತ್ಸವದ ವೇಳೆ ಶ್ರೀಕೃಷ್ಣನ ಮಣ್ಣಿನ ಮೂರ್ತಿ ಕೈಜಾರಿ ಕೆಳಗೆ ಬಿದ್ದು ಭಗ್ನಗೊಂಡಿತ್ತು. ಈ ಘಟನೆಗೆ ಯಾವುದೇ ಲೋಪದೋಷವಿಲ್ಲ ಎಂದು ಅಷ್ಟಮಠದ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು. ಆದರೆ, ಅಷ್ಟಮಂಗಳ ಪ್ರಶ್ನೆಯಲ್ಲಿ ನಾಡಿಗೆ ಕಾಳಸರ್ಪ ದೋಷವಿದೆ ಎಂಬ ಉತ್ತರ ಬಂದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಕೋಡಿಶ್ರೀಗಳ ‘ಕಟ್ಟೆಯಿಲ್ಲದ ಬಾವಿ ಹುಟ್ಟಿ, ನೆಟ್ಟನೀ ಸುರಂಗವ ಕೊರೆದು, ಗಟ್ಟಿಭೂಮಿ ಬಟ್ಟಬಯಲಾಯ್ತು’ ಎಂಬ ನುಡಿಗಟ್ಟನ್ನು ಆಪತ್ತಿನ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ನೇಪಾಳದ ರೀತಿಯ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಶ್ರೀಗಳು ಹೇಳಿರುವುದು ಕುತೂಹಲ ಮೂಡಿಸಿದೆ.
ಉಡುಪಿಯ ವಿಟ್ಲಪಿಂಡಿ ಉತ್ಸವದಲ್ಲಿ ಪರ್ಯಾಯ ಶಿರೂರು ಮಠದ ಶ್ರೀಗಳು ರಥದಿಂದ ಮಣ್ಣಿನ ಕೃಷ್ಣನ ಮೂರ್ತಿಯನ್ನು ಇಳಿಸುವ ವೇಳೆ ಅದು ಕೈಜಾರಿ ಭಕ್ತರ ಕೈಗೆ ಬಿದ್ದಿತ್ತು. ಪರಿಣಾಮ ಮೂರ್ತಿ ಸ್ವಲ್ಪ ಭಗ್ನಗೊಂಡಿದ್ದು, ಈ ಘಟನೆ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.
ದೇಶಕ್ಕೆ ಅನಿರೀಕ್ಷಿತ ಸಮಸ್ಯೆಗಳು ಎದುರಾದಾಗ ಕರಾವಳಿ ಭಾಗದಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಿ ಪರಿಹಾರ ಕಂಡುಕೊಳ್ಳುವ ಸಂಪ್ರದಾಯವಿದೆ. ಉಡುಪಿಯಲ್ಲೂ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ದೇಶಕ್ಕೆ ಕಾಳಸರ್ಪ ಯೋಗವಿದ್ದು, ಇದು ಲೋಕಕ್ಕೆ ಕಂಟಕದ ಸಮಯ ಎಂದು ಹೇಳಲಾಗಿದೆ. ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದ್ದು, ಪರಿಹಾರ ಕೈಗೊಳ್ಳದಿದ್ದರೆ ದೇಶಕ್ಕೆ ಅಪಾಯ ಎದುರಾಗಬಹುದು ಎಂದು ಶಿರೂರು ಮಠದ ಯತಿಗಳು ತಿಳಿಸಿದ್ದಾರೆ.
ಇದೀಗ ಉಡುಪಿಯ ಘಟನೆ ಮತ್ತು ಕೋಡಿಶ್ರೀಗಳ ಭವಿಷ್ಯವನ್ನು ಜನರು ಪರಸ್ಪರ ತಾಳೆ ಹಾಕುತ್ತಿದ್ದಾರೆ. ಪ್ರವಾಹ, ಯುದ್ಧ ಹಾಗೂ ಅನ್ನ-ನೀರಿನ ಕೊರತೆಯಂತಹ ಸಂಕಷ್ಟಗಳು ಎದುರಾಗಬಹುದು ಎಂದು ಕೋಡಿಶ್ರೀಗಳು ಎಚ್ಚರಿಸಿದ್ದು, ಮುಂಗಾರು ಮಳೆ ಕಡಿಮೆಯಾಗಿದ್ದರೂ ಹಿಂಗಾರು ಉತ್ತಮವಾಗಲಿದೆ ಎಂದು ಹೇಳಿದ್ದಾರೆ.




































