
ಜನಪ್ರತಿನಿಧಿಗಳ ವೇತನ, ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಪಿಂಚಣಿಗಳಿಗೆ ಪದೇಪದೇ ಹೆಚ್ಚಳ ಮಾಡುತ್ತಿರುವ ಕ್ರಮಕ್ಕೆ ಸಮಾಜಸೇವಕ ಬೆಳ್ಳಿಪ್ಪಾಡಿ ನೇಮಿರಾಜ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರು ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ‘ರಾಜ ವೈಭವ’ದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಶಾಸಕರಿಗೆ ಮಾಸಿಕ ಮೂಲ ವೇತನ ₹ 80 ಸಾವಿರ ದೊರೆಯುತ್ತಿದ್ದು, ಕ್ಷೇತ್ರ ಭತ್ಯೆ ₹ 1 ಲಕ್ಷ, ಕ್ಷೇತ್ರ ಪ್ರಯಾಣ ಭತ್ಯೆ ₹ 80 ಸಾವಿರ, ದೂರವಾಣಿ ಭತ್ಯೆ ₹ 20 ಸಾವಿರ, ಸಿಬ್ಬಂದಿ/ವೈಯಕ್ತಿಕ ಸಹಾಯಕ ಭತ್ಯೆ ₹ 25 ಸಾವಿರ ಹಾಗೂ ಅಂಚೆ ಮತ್ತು ಇತರೆ ವೆಚ್ಚಗಳಿಗೆ ₹ 5 ಸಾವಿರ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿವೆ. ವೇತನ ಹಾಗೂ ಭತ್ಯೆಗಳು ಸೇರಿ ಮಾಸಿಕವಾಗಿ ಸುಮಾರು ₹ 2.5-3 ಲಕ್ಷದವರೆಗೂ ಇದೆ.
ದೈನಂದಿನ ಭತ್ಯೆ, ಪ್ರಯಾಣಕ್ಕೂ ಸೌಲಭ್ಯ.
ವಿಧಾನಸಭಾ ಅಧಿವೇಶನ, ಸಮಿತಿ ಸಭೆ ಸೇರಿದಂತೆ ಅಧಿಕೃತ ಕರ್ತವ್ಯಗಳ ಸಂದರ್ಭದಲ್ಲಿ ದೊರೆಯುವ ದೈನಂದಿನ ಭತ್ಯೆಯನ್ನು ₹ 2,000ರಿಂದ ₹ 2,500ಕ್ಕೆ ಹೆಚ್ಚಿಸಲಾಗಿದೆ. ಶಾಸಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ದೇಶದೊಳಗಿನ ರೈಲು ಅಥವಾ ವಿಮಾನ ಪ್ರಯಾಣಕ್ಕೂ ನಿಗದಿತ ಸೌಲಭ್ಯಗಳಿವೆ.
ವಸತಿ, ವೈದ್ಯಕೀಯ ಸೌಲಭ್ಯವೂ ಲಭ್ಯ
ಬೆಂಗಳೂರಿನಲ್ಲಿ ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ Legislators’ Home (LH) ಮೂಲಕ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಶಾಸಕರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಿಯಮಾನುಸಾರ ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವೂ ಇದೆ.
ವಾಹನ ಖರೀದಿಗೂ ಮುಂಗಡ
ಹೊಸ ವಾಹನ ಖರೀದಿಸಲು ಶಾಸಕರಿಗೆ ಸರ್ಕಾರದಿಂದ ವಾಹನ ಮುಂಗಡದ ವ್ಯವಸ್ಥೆಯಿದ್ದು, ಅತ್ಯಂತ ಕಡಿಮೆ ಬಡ್ಡಿದರ 7%ದಲ್ಲಿ ವಾಹನ ಸಾಲ/ಮುಂಗಡ ಪಡೆಯಲು ಅವಕಾಶವಿದೆ.
ಮಾಜಿ ಶಾಸಕರಿಗೂ ₹ 75 ಸಾವಿರ ಪಿಂಚಣಿ
ಒಮ್ಮೆ ಶಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಶಾಸಕರಿಗೆ ತಿಂಗಳಿಗೆ ₹ 75 ಸಾವಿರ ಪಿಂಚಣಿ ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರೆ, ಸೇವಾವಧಿಗೆ ಅನುಗುಣವಾಗಿ ಹೆಚ್ಚುವರಿ ಪಿಂಚಣಿ ಸೌಲಭ್ಯವೂ ದೊರೆಯುತ್ತದೆ.
ಇವೆಲ್ಲದರ ಸಂಪೂರ್ಣ ಹೊರೆ ಸರ್ಕಾರದ ಬೊಕ್ಕಸದ ಮೇಲಿದ್ದು, ಅಂತಿಮವಾಗಿ ಅದು ಜನರ ತೆರಿಗೆ ಹಣವೇ ಆಗಿದೆ ಎಂದು ಹೇಳಿರುವ ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಜನಪ್ರತಿನಿಧಿಗಳ ವೇತನ, ಸೌಲಭ್ಯ ಹಾಗೂ ಪಿಂಚಣಿ ಇದೇ ರೀತಿ ಹೆಚ್ಚುತ್ತಾ ಹೋದರೆ, ಮುಂದೊಂದು ದಿನ ಅಭಿವೃದ್ಧಿಗಾಗಿ ಅಲ್ಲ, ಜನಪ್ರತಿನಿಧಿಗಳನ್ನು ಸಾಕುವುದಕ್ಕಾಗಿಯೇ ಸರ್ಕಾರ ವಿದೇಶಗಳಿಂದ ಸಾಲ ಪಡೆಯುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




































