ನ.2 ಮತ್ತು 3ರಂದು ರಾಜ್ಯಮಟ್ಟದ ‘ಪತ್ರಕರ್ತರ ಕ್ರಿಕೆಟ್ ಕಲರವ’

ಮಡಿಕೇರಿ: ಪತ್ರಕರ್ತರ ವೃತ್ತಿಜೀವನದ ಒತ್ತಡದ ನಡುವೆ ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ಸಂಘಟನಾ ಬಾಂಧವ್ಯವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯನ್ನು ನ. 2 ಮತ್ತು 3ರಂದು ಮಡಿಕೇರಿಯಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪಂದ್ಯಾವಳಿಯ ಆತಿಥ್ಯ ವಹಿಸಿದೆ.
ಪಂದ್ಯಾವಳಿಯಲ್ಲಿ 22 ಹೊರಜಿಲ್ಲೆಗಳ ತಂಡಗಳು ಹಾಗೂ ಆತಿಥೇಯ ಕೊಡಗಿನ ಎರಡು ತಂಡಗಳು ಸೇರಿದಂತೆ ಒಟ್ಟು 24 ತಂಡಗಳು ಭಾಗವಹಿಸಲಿವೆ. ಪ್ರತಿ ತಂಡದಿಂದ 16 ಆಟಗಾರರಂತೆ ಒಟ್ಟು 384 ಪತ್ರಕರ್ತರು ಕ್ರಿಕೆಟ್ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಗಳು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನ, ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಪೊಲೀಸ್ ಕವಾಯತು ಮೈದಾನ ಸೇರಿದಂತೆ ಮೂರು ಮೈದಾನಗಳ ಐದು ಪಿಚ್‌ಗಳಲ್ಲಿ ನಡೆಯಲಿವೆ.
ಕೊಡಗಿನಲ್ಲಿ 2013ರಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದೀಗ 13 ವರ್ಷಗಳ ಬಳಿಕ ಮತ್ತೊಮ್ಮೆ ಮಡಿಕೇರಿ ಈ ಕ್ರೀಡಾ ಸಂಭ್ರಮಕ್ಕೆ ಆತಿಥ್ಯ ವಹಿಸುತ್ತಿದೆ.
ಶಿವಮೊಗ್ಗ, ಬಾಗಲಕೋಟೆ, ಹಾವೇರಿ, ಮಂಡ್ಯ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಕೋಲಾರ, ಚಿತ್ರದುರ್ಗ, ಹಾಸನ, ರಾಮನಗರ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮೈಸೂರು, ಕೊಪ್ಪಳ, ಬೀದರ್, ದಾವಣಗೆರೆ, ಗದಗ, ಬಳ್ಳಾರಿ, ಕೊಡಗು ತಂಡಗಳು ಭಾಗವಹಿಸಲಿವೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ₹ 1 ಲಕ್ಷ, ರನ್ನರ್ ಅಪ್ ತಂಡಕ್ಕೆ ₹ 50 ಸಾವಿರ ಹಾಗೂ ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ ₹ 25 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಗುವುದು. ಇದರೊಂದಿಗೆ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್ ಸೇರಿದಂತೆ ವಿವಿಧ ವೈಯಕ್ತಿಕ ಬಹುಮಾನಗಳೂ ಇರಲಿವೆ.
























