ದೈಹಿಕ ಶಕ್ತಿಯೇ ದೇಶದ ಶಕ್ತಿ :ಸೀತಾನದಿ ವಿಠಲ ಶೆಟ್ಟಿ ಅಭಿಮತ

ಗಣಿತನಗರ: ಕ್ರೀಡೆಯು ವ್ಯಕ್ತಿಯ ದೈಹಿಕ ಸದೃಢತೆಗೆ ಬಹುಮುಖ್ಯ ಪಾತ್ರ ವಹಿಸುತ್ತದೆ. ದೈಹಿಕ ಶಕ್ತಿಯೇ ದೇಶದ ಶಕ್ತಿಯಾದಾಗ ಮಾತ್ರ ಆರೋಗ್ಯವಂತ ಭಾರತ ನಿರ್ಮಾಣ ಸಾಧ್ಯ. ಜ್ಞಾನಸುಧಾ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿದೆ ಎಂದು ಭಾವಿಸಿದ್ದೆ. ಆದರೆ ಇಲ್ಲಿನ ಸದಾ ಹಸಿರಿನಿಂದ ಕಂಗೊಳಿಸುತ್ತಿರುವ ಗಣಿತನಗರದ ಕ್ರೀಡಾಂಗಣವು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡಾಂಗಣಗಳಿಗಿಂತಲೂ ಅತ್ಯುತ್ತಮವಾಗಿದೆ. ಮೂವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಹಾಗೂ 26 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಶಿಸ್ತು ಒಳಗೊಂಡ ಪರಿಪೂರ್ಣ ಶಿಕ್ಷಣ ಸಂಸ್ಥೆಯಾಗಿ ಜ್ಞಾನಸುಧಾ ಹೊರಹೊಮ್ಮಿದೆ ಎಂದು ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಸೀತಾನದಿ ವಿಠಲ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೆರಾಡಿ-ಬಾರ್ಕೂರಿನ ಕಟಿಲೇಶ್ವರಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಕಾಶ್ ಶೆಟ್ಟಿ ಮಾತನಾಡಿ, ಪಂದ್ಯಾಟದಲ್ಲಿ ಸೋಲು-ಗೆಲುವುಗಳನ್ನು ಪರಿಗಣಿಸದೆ ಕ್ರೀಡೆಯನ್ನು ಗೆಲ್ಲಿಸಬೇಕು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಸುಧಾ, ದೇಶಸುಧಾ, ಸಿಬ್ಬಂದಿ ಹಾಗೂ ಪೋಷಕರಿಗೆ ಪಾದಪೂಜೆ, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದೊಂದಿಗೆ ಪ್ರೋತ್ಸಾಹಧನ ವಿತರಿಸುವ ಮೂಲಕ ಸ್ಫೂರ್ತಿ ತುಂಬುತ್ತಿರುವ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ. ಕೊಡವೂರ್ ವಹಿಸಿದ್ದರು.
ಎಂಟರ್ಪ್ರೆನರ್ಶಿಪ್ ಬಿಸಿನೆಸ್ ಫೇರ್ ಉದ್ಘಾಟನೆ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಮುನ್ನಡೆಸುವ ಎಂಟರ್ಪ್ರೆನರ್ಶಿಪ್ ಬಿಸಿನೆಸ್ ಫೇರ್ ಅನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾ ರಾವ್ ಯು., ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ., ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು., ಡೀನ್ ಸ್ಟೂಡೆಂಟ್ ಅಫೇರ್ಸ್ ಶಕುಂತಳಾ ಎಂ. ಸುವರ್ಣ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕರಾದ ಶ್ರೀ ಸಂದೀಪ್, ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕರಾದ ಶೈಲೇಶ್ ಶೆಟ್ಟಿ ಹಾಗೂ ಸಂಸ್ಥೆಯ ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಮತ್ತು ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಂದಿಸಿದರು.























































































